ವಿಜಯಪುರ/ ಮುದ್ದೇಬಿಹಾಳ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಿಸಲು ಮಳೆರಾಯ ನಾಲ್ಕು ದಿನಗಳ ಮುಂಚೆಯೇ ಎಂಟ್ರಿ ಕೊಟ್ಟಿದ್ದಾನೆ.
ಮುದ್ದೇಬಿಹಾಳ ತಾಲೂಕಿನಾದ್ಯಂತ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ಹೊಲಗಳ ಒಡ್ಡು ಒಡೆದು ನೀರು ತುಂಬಿ ಹರಿದು ಮಣ್ಣು ಕೊಚ್ಚಿ ಹೋಗಿದೆ. ಢವಳಗಿ ರಸ್ತೆಯಲ್ಲಿ ಎರಡ್ಮೂರು ಮರಗಳು ಧರೆಗುರುಳಿದ್ದು, ತಾಲೂಕಿನ ಇಣಚಗಲ್ ಕ್ರಾಸ್ ಬಳಿ ಕಿರು ಕಾಲುವೆಯ ನೀರು ರಸ್ತೆಯ ಮೇಲೆ ಹರಿದಿದೆ. ಬಿದರಕುಂದಿ ಗ್ರಾಮದಲ್ಲಿ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮಳೆಯಿಂದ ಮೂರ್ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಹೊಲಗಳಲ್ಲಿ ನೀರು ಸಂಗ್ರಹವಾಗಿದ್ದು, ಮುದ್ದೇಬಿಹಾಳ ಪಟ್ಟಣದ ಕೆರೆಯೂ ಭರ್ತಿಯಾಗಿದೆ. ಈ ಮಳೆ ಬಿತ್ತನೆಗೆ ಅನುಕೂವಾಗಿದೆ ಎಂದು ರೈತರು ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನಲ್ಲಿ ಸುರಿದ ಮಳೆಗೆ ಡೋಣಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಸುತ್ತಮುತ್ತಲಿನ ಹೊಲಗಳಿಗೆ ನೀರು ನುಗ್ಗಿ ಬಿತ್ತನೆ ಕಾರ್ಯಕ್ಕೆ ಅಡಚಣೆಯಾಗಿದೆ. ಇದೇ ಮೊದಲ ಬಾರಿ ಜೂನ್ ಮೊದಲ ವಾರದಲ್ಲಿಯೇ ಡೋಣಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದರಿಂದ ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.