ವಿಜಯಪುರ:ಎರಡು ಕೈ ಸರಿಯಾಗಿ ಇದ್ದವರೇ ಕೆಟ್ಟದಾಗಿ ಬರಹ ರೂಢಿಸಿಕೊಂಡಿರುವ ಈ ದಿನಗಳಲ್ಲಿ ಎರಡೂ ಕೈ ಇಲ್ಲದಿದ್ದರೂ ಬಲಗಾಲನ್ನೇ ಕೈಯಂತೆ ಬಳಸಿ ಸ್ಪಷ್ಟ ಹಾಗೂ ಶುದ್ಧ ಬರಹ ಬರೆಯವುದನ್ನು 14 ವರ್ಷದ ಬಾಲಕಿ ರೂಢಿಸಿಕೊಂಡಿದ್ದಾಳೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 14 ವರ್ಷದ ಬಾಲಕಿ ದೇವಮ್ಮ ಕಾಲಿನಲ್ಲಿಯೇ ಬರೆಯುವ ಮೂಲಕ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ. ಈಕೆ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆ ತರಗತಿ ಓದುತ್ತಿದ್ದು, ಈಕೆಯ ತಂದೆ ಮಲ್ಲಪ್ಪ ಹೊಸಮನಿ ಆಟೋ ಡ್ರೈವರ್ ಆಗಿದ್ದಾಳೆ. ಇವರ ಮೂವರು ಮಕ್ಕಳಲ್ಲಿ ದೇವಮ್ಮ 2ನೇ ಮಗಳು.
ಕಾಲಿನಲ್ಲೇ ಸ್ಪಷ್ಟ ಹಾಗೂ ಶುದ್ಧವಾಗಿ ಬರೆಯುವ ದೇವಮ್ಮ ಎರಡು ಕೈ ಇಲ್ಲದೇ ಜನಿಸಿದ ಈಕೆಯನ್ನು ಆಕೆಯ ತಂದೆ-ತಾಯಿ ಬಹು ಕಾಳಜಿಯಿಂದ ನೋಡಿಕೊಂಡಿದ್ದರಿಂದ ಆಕೆ ಸ್ವಾವಲಂಬಿಯಾಗುವತ್ತ ದಾಪುಗಾಲು ಹಾಕುತ್ತಿದ್ದಾಳೆ. ಬಲಗಾಲಿನ ಹೆಬ್ಬೆರಳು ಮತ್ತು ಎರಡನೇ ಬೆರಳಿನ ಮಧ್ಯೆ ಪೆನ್ ಹಿಡಿದು ಬರೆಯುತ್ತಾಳೆ. ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಹೆಚ್ಚು ಪ್ರತಿಭಾವಂತಳಾಗಿರುವ ದೇವಮ್ಮಗೆ ಹುಟ್ಟಿದಾಗಿನಿಂದಲೂ ಎರಡು ಕೈಗಳಿಲ್ಲ. ಆದರೆ ಆಕೆಯ ಆತ್ಮಸ್ಥೈರ್ಯ ಮಾತ್ರ ಇಮ್ಮಡಿಯಾಗಿದೆ.
ಈಕೆಗೆ ಮನೆಯ ಅಕ್ಕಪಕ್ಕದ ಮಕ್ಕಳನ್ನು ನೋಡಿ ಕೈಗಳು ಇಲ್ಲ ಎನ್ನುವ ಕೊರಗು ಕಾಡಿತ್ತಾದರೂ, ತಂದೆಯ ಪ್ರೋತ್ಸಾಹ, ತಾಯಿಯ ಕಾಳಜಿ ಆಕೆಗೆ ಪ್ರೇರಣೆ ನೀಡಿದೆಯಂತೆ. ಅದರಂತೆ ಬಾಲಕಿ ಕಾಲಿನಿಂದಲೇ ಬರೆಯುವುದನ್ನು ಶುರು ಮಾಡಿಕೊಂಡಿದ್ದಾಳೆ. ಅಲ್ಲದೇ ದೇವಮ್ಮ ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ ಬಹುತೇಕ ಸ್ವಾವಲಂಬಿಯಾಗಿ ಜೀವಿಸುತ್ತಿದ್ದಾಳೆ.