ವಿಜಯಪುರ:ಸಿಂದಗಿಯಲ್ಲಿ ಕಾಂಗ್ರೆಸ್ ಗಾಳಿ ಶುರುವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಮನಗೂಳಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಮಗ ಇದೀಗ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಯಾವ ಕುಟುಂಬದ ಹಿಡಿತದಲ್ಲೂ ಇಲ್ಲ. ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಟ್ಟವನು. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವನು ನಾನು. ಯಾವ ಕುಟುಂಬದ ಹಿಡಿತದಲ್ಲಿಲ್ಲ ಎಂದರು.
ಸಿಎಂ ಬೊಮ್ಮಾಯಿ RSS ನಲ್ಲಿ ಇದ್ದರಾ? ಅವರು ಮೂಲ RSS ಏನ್ರೀ? ಈಗ RSSನ ಹೊಗಳ್ತಾ ಇದ್ದಾರೆ. ಹಿಂದೆ ನಮ್ಮ ಜೊತೆಗೆ ಇದ್ದವರು. ಅವರ ತಂದೆ ಎಸ್.ಆರ್.ಬೊಮ್ಮಾಯಿ ಯಾವ ಪಾರ್ಟಿಯಲ್ಲಿದ್ದರು ಅವರಿಗೆ ಗೊತ್ತಿಲ್ಲವೆ? ಅವರು ಸಹ ಜನತಾದಳದಲ್ಲಿ ಇದ್ದವರು ಎಂದು ಹೇಳಿದರು.
ಬಿಜೆಪಿಗೆ ಇತ್ತಿಚೆಗೆ ಹೋದವರು RSSನ್ನು ಈಗ ಹೋಗಳ್ತಾ ಕೂತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು ನಾನು, ಯಾವ ಒಂದು ಫ್ಯಾಮಿಲಿ ಹಿಡಿತದಲ್ಲಿ ಇರೋಕೆ ಸಾಧ್ಯವಿಲ್ಲ ಎಂದರು.
ಹೆಚ್ಡಿಕೆ ಹಾಗೂ ಇಬ್ರಾಹಿಂ ಭೇಟಿ ವಿಚಾರ:ಅವರು ಯಾಕೆ ಭೇಟಿಯಾಗಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಏನು ಮಾತಾಡಿದ್ದಾರೋ ಏನೋ ನನಗೆ ಗೊತ್ತಿಲ್ಲ. ಹಾನಗಲ್ನಿಂದ ಸಿಂದಗಿಗೆ ಬಂದಿದ್ದೇನೆ. ಅವರು ಜೆಡಿಎಸ್ ಸೇರುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.