ವಿಜಯಪುರ :ಕೃಷಿಕರನ್ನಮೀನುಗಾರಿಕೆಗೆ ಆಕರ್ಷಿಸಲು ಜೊತೆಗೆ ರೈತರಿಗೆ ಮೀನುಗಾರಿಕೆ ಕುರಿತು ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಿಂದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ನಗರದ ಹೊರವಲಯದಲ್ಲಿ ಮೀನು ಸಂಶೋಧನಾ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತೋಟಗಾರಿಕೆ ಮಹಾವಿದ್ಯಾಲಯದ ಅರಭಾವಿ ಡೀನ್ ಡಾ. ಎಸ್ ಆಯ್ ಹನುಮಶೆಟ್ಟಿ ಮಾತನಾಡಿ, ಮೀನುಗಾರಿಕೆ ರೈತರಿಗೆ ಉತ್ತಮ ಆದಾಯ ನೀಡುವ ಉದ್ಯಮವಾಗಿದೆ. ಕೃಷಿ ಚಟುವಟಿಕೆ ನಡೆಸುವುದರ ಜೊತೆಗೆ ಮೀನು ಸಾಕಾಣಿಕೆ ಮಾಡುವುದರಿಂದ ರೈತರು ಆರ್ಥಿಕವಾಗಿ ವೃದ್ಧಿಯಾಗಲು ಸಹಾಯಕವಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆದು ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಬೇಕು ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ವಿಜಯಪುರ ಮೀನು ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ವಿಜಯಕುಮಾರ ಎಸ್, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡುವುದರಿಂದ ವಾರ್ಷಿಕ 6 ಲಕ್ಷದವರಿಗೂ ಆದಾಯ ಪಡೆಯಬಹುದಾಗಿದೆ. ಅಲ್ಲದೆ ಮೀನುಗಾರಿಕೆ ಇಲಾಖೆಯಿಂದ ತರಬೇತಿ ಜೊತೆಗೆ ಮೀನಿನ ಮರಿಗಳನ್ನು ನೀಡಲಾಗುತ್ತಿದೆ. ಅದರ ಸದುಪಯೋಗ ರೈತರು ಪಡೆದುಕೊಳ್ಳಬೇಕು.
ಮೀನುಗಾರಿಕೆ ಮಾಡಲು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಮುಂದೆ ಬರುತ್ತಿದ್ದು, ಜಿಲ್ಲೆಯಲ್ಲಿ ಲಿಂಬೆ, ದ್ರಾಕ್ಷಿ ಸೇರಿ ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ಇಂದು ಮೀನು ಸಾಕಾಣಿಕೆ ಮಾಡುವುದು ವಾಣಿಜ್ಯೋದ್ಯಮವಾಗಿದೆ. ಜಿಲ್ಲೆಯಲ್ಲಿ ಕೆರೆ ತುಂಬು ಯೋಜನೆಗಳು ಜಾರಿಯಾಗಿವೆ. ಜೊತೆಗೆ ಮೀನು ಸಾಕಾಣಿಕೆ ಮಾಡಲು ರೈತರಿಗೆ ಪೂರಕ ವಾತಾವರಣವಿದೆ ಎಂದರು.
ಕಾರ್ಯಕ್ರಮದಲ್ಲಿ ಮೀನು ಸಾಕಾಣಿಕೆ ಮಾಹಿತಿಯ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ರೈತರಿಗೆ ಸಂಶೋಧನಾ ಕೇಂದ್ರದಿಂದ ಮೀನಿನ ತಳಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರೈತರು ಸೇರಿ ಹಲವರು ಭಾಗಿಯಾಗಿದ್ದರು.