ಮುದ್ದೇಬಿಹಾಳ(ವಿಜಯಪುರ) : ರೈತರು ತಮ್ಮ ಬೆಳೆಗಳ ಸಮೀಕ್ಷೆ ನಡೆಸಲು ಸರ್ಕಾರ ಆ್ಯಪ್ ರೂಪಿಸಿದೆ. ಆದರೆ ತಾಳಿಕೋಟೆ ರೈತರು ಬೆಳೆ ಸಮೀಕ್ಷೆ ನಡೆಸಲು ಮುಂದಾದಾಗ ಜಮೀನುಗಳ ಸರ್ವೆ ನಂಬರ್ ಸಿಗದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳೆ ಸಮೀಕ್ಷೆ ತೊಂದರೆ ನಿವಾರಣೆ ಕುರಿತು ತಹಶಿಲ್ದಾರ್ ಕಾರ್ಯಾಲಯದಲ್ಲಿ ಕೃಷಿ ಇಲಾಖೆಯಿಂದ ಇಂದು ಫೋನ್ ಇನ್ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ತಾಲೂಕಿನ 50ಕ್ಕೂ ಹೆಚ್ಚು ರೈತರು ದೂರವಾಣಿ ಕರೆ ಮೂಲಕ ಬೆಳೆ ಸಮೀಕ್ಷೆ ವೇಳೆ ಎದುರಿಸುತ್ತಿರುವ ಸಮಸ್ಯೆಯನ್ನು ಹೇಳಿಕೊಂಡರು. ಕೆಲ ರೈತರು ಜಮೀನುಗಳಲ್ಲಿ ನಿಂತುಕೊಂಡು ಸಹಾಯವಾಣಿಗೆ ಕರೆ ಮಾಡಿದ್ದು, ಬೆಳೆ ಸಮೀಕ್ಷೆ ವೇಳೆ ಆಗುತ್ತಿದ್ದ ತೊಂದರೆ ನಿವಾರಿಸಿಕೊಂಡರು.
ಪೋನ್ ಇನ್ ಕಾರ್ಯಕ್ರಮದಲ್ಲಿ ಬೆಳೆ ಸಮಿಕ್ಷೆಯ ಮಾಹಿತಿ ಸಲ್ಲಿಸುವ ಆ್ಯಪ್ ಡೌನಲೋಡ್ ಮಾಡಿಕೊಳ್ಳುವ ಹಾಗೂ ವಿವರಗಳನ್ನು ದಾಖಲಿಸುವ ಕುರಿತು ಸುದೀರ್ಘವಾಗಿ ರೈತರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ವಿಶೇಷವೆಂದರೆ ಅತೀ ಹೆಚ್ಚು ರೈತರು ತಮ್ಮ ಜಮೀನಿನ ಸರ್ವೆ ನಂಬರ್‌ಗಳು ಸಮೀಕ್ಷೆಯ ವೇಳೆ ಆ್ಯಪ್ನಲ್ಲಿ ಕಂಡು ಬರುತ್ತಿಲ್ಲ ಎಂಬ ದೂರುಗಳನ್ನೇ ಹೆಚ್ಚಾಗಿ ಕೇಳಿ ಬಂದವು. ಇದಕ್ಕೆ ಅಧಿಕಾರಿಗಳು ತಹಶಿಲ್ದಾರ್ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕೆಂದು ತಿಳಿಸಿದರು.
ತಾಳಿಕೋಟಿ ತಹಶಿಲ್ದಾರ್ ಅನೀಲ್ ಕುಮಾರ್ ಢವಳಗಿ ಮಾರ್ಗದರ್ಶನದಲ್ಲಿ ನಡೆದ ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಹೇಶ ಜೋಶಿ, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಲಿಂಗಪ್ಪ ಕುಂಬಾರ, ಸಹಾಯಕರಾಗಿ ರವೀಂದ್ರ ಬಾಬಾನಗರ, ಮುನ್ನಾ ಅತ್ತಾರ, ರಾಜು ಪಾಟೀಲ ಅವರು ಕಾರ್ಯನಿರ್ವಹಿಸಿದರು.