ಮುದ್ದೇಬಿಹಾಳ :ಹೈಬ್ರೀಡ್ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ರೋಗ ನಾಶಕಗಳ ಅತಿಯಾದ ಬಳಕೆಯಿಂದ ಒಕ್ಕಲುತನ ಹುಟ್ಟುವಳಿಗಳ ಗುಣಮಟ್ಟ ಕುಸಿಯುತ್ತಿರುವುದರ ಜೊತೆ ವಿಷಮಯವಾಗುತ್ತಿದೆ.ಇದು ಮುಂದಿನ ಪೀಳಿಗೆಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಆವರಣದಲ್ಲಿ ಏರ್ಪಡಿಸಿದ್ದ ರೈತ ಮುಂದಾಳು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಳಿಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಮಾತನಾಡಿ, ದೇಶದ ಸಮೃದ್ಧತೆಯ ಸಂಕೇತವಾಗಬೇಕಿದ್ದ ರೈತ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಿ ಅವನ ಬದುಕಿಗೆ ಬೇಕಾದ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ ಎಂದರು.
ನಂತರ ರೈತ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಗ್ರಾಮೀಣ ಕೃಷಿ ಉದ್ದಿಮೆಗಳ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳಿಗೆ ಅನಿರ್ಭಂದಿತ ಹಣಕಾಸು ಸೌಲಭ್ಯ ಒದಗಿಸಲು ಸರ್ಕಾರ ನೇರಸಾಲ ಯೋಜನೆಯನ್ನು ಜಾರಿಗೆ ತರಬೇಕು. ನಬಾರ್ಡ್ ಬ್ಯಾಂಕ್ ನ್ನು ರೈತರಿಗೆ ಸಾಲ ನೀಡುವ ಪೂರ್ಣಾವಧಿಯ ಸಂಸ್ಥೆಯನ್ನಾಗಿಸಿ ಭವಿಷ್ಯದ ಕೃಷಿ ಕ್ಷೇತ್ರಕ್ಕೆ ಒಳಿತಾಗಲಿದೆ ಎಂದರು.
ಈ ವೇಳೆ ಹುತಾತ್ಮ ಯೋಧ ಶಿವಾನಂದ ಜ. ಬಡಿಗೇರ ಇವರ ಹೆಸರಲ್ಲಿ ಯೋಗ ವಿಜ್ಞಾನ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಘೋಷಿಸಲಾಯಿತು.