ವಿಜಯಪುರ:2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದ ನಾಲ್ವರು 625ಕ್ಕೆ 625 ಅಂಕ ಗಳಿಸಿ ಟಾಪರ್ ಆಗಿ ಮಿಂಚಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಗರಬೆಟ್ಟದ ಎಸ್ಡಿವಿವಿ ಸಂಘದ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿ ಭೀಮನಗೌಡ ಬಿರಾದಾರ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಹಿರಿಮೆ ತಂದಿದ್ದಾರೆ.
ಒಟ್ಟು ಶೇ 91.23 ರಷ್ಟು ಫಲಿತಾಂಶ ಪಡೆದು, ವಿಜಯಪುರ ಜಿಲ್ಲೆ 11ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ. 87.54ರಷ್ಟು ಫಲಿತಾಂಶ ಪಡೆದು 12ನೇ ಸ್ಥಾನದಲ್ಲಿತ್ತು. ಒಟ್ಟಾರೆ ಶೇ. 3.69ರಷ್ಟು ಫಲಿತಾಂಶ ಏರಿಕೆಯಾಗಿದೆ. ಜಿಲ್ಲೆಯಲ್ಲಿ 40,448 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 36,898 ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದ್ದಾರೆ.
ಈ ಕುರಿತು ಸಂತೋಷ ಹಂಚಿಕೊಂಡಿರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ, ಪರೀಕ್ಷೆ ಫಲಿತಾಂಶ ಈ ಮಟ್ಟಕ್ಕೆ ಬರುತ್ತದೆ ಎಂದು ನಿರೀಕ್ಷಿರಲಿಲ್ಲ. 5 ಅಥವಾ 6ನೇ ಸ್ಥಾನ ರಾಜ್ಯದಲ್ಲಿ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. 11ನೇ ಸ್ಥಾನ ಬಂದಿದೆ. ಜಿಲ್ಲೆಯ ಮಟ್ಟಕ್ಕೆ ಇದು ಖುಷಿಯ ವಿಚಾರವಾಗಿದ್ದು, ನಮ್ಮ ಜಿಲ್ಲೆಯ ವಿದ್ಯಾರ್ಥಿ ಭೀಮನಗೌಡ ಬಿರಾದಾರ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಆತನಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.