ಮುದ್ದೇಬಿಹಾಳ (ವಿಜಯಪುರ) :ಹೊಲದಲ್ಲಿನ ಬೆಳೆಗೆ ನೀರು ಹಾಯಿಸಲು ಮೋಟಾರ್ ಚಾಲೂ ಮಾಡಲು ಹೋಗಿದ್ದ ರೈತನೋರ್ವ ವಿದ್ಯುತ್ ತಗುಲಿ ಗಾಬರಿಗೊಂಡು ಕಾಲುವೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮ ವ್ಯಾಪ್ತಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಈ ಘಟನೆ ನಡೆದಿದೆ.
ನಿನ್ನೆ (ಗುರುವಾರ) ಸಂಜೆ ಈ ಘಟನೆ ನಡೆದಿದ್ದು, ಶವ ಕಾಲುವೆಯಲ್ಲಿ ತೇಲಿಕೊಂಡು ಕೆಸಾಪೂರ ಗ್ರಾಮದ ಬಳಿ ಬಂದಾಗ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತ ರೈತನನ್ನು ಕೋಳೂರು ಗ್ರಾಮದ ಹಣಮಂತ ಭೀಮಶೆಪ್ಪ ಹದ್ದಿನ (54) ಎಂದು ಗುರುತಿಸಲಾಗಿದೆ.
1.5 ಎಕರೆ ಜಮೀನು : ಮೃತ ರೈತನಿಗೆ 4 ಎಕರೆ ಜಮೀನು ಇತ್ತು. ಆದರೆ, ಕಾಲುವೆ ನಿರ್ಮಾಣದಲ್ಲಿ ಅಂದಾಜು 2 ಎಕರೆಗೂ ಹೆಚ್ಚು ಜಮೀನು ಮುಳುಗಡೆ ಆಗಿತ್ತು. ಇದ್ದ ಒಂದೂವರೆ ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದಿದ್ದ. ಇದಕ್ಕೆ ಕಾಲುವೆ ನೀರನ್ನು ಅವಲಂಬಿಸಿದ್ದ ರೈತ ಮುಖ್ಯ ಕಾಲುವೆಯಿಂದ ನೀರೆತ್ತಿ ಹೊಲಕ್ಕೆ ಹರಿಸಲು ವಿದ್ಯುತ್ ಚಾಲಿತ ಮೋಟಾರ್ ಅಳವಡಿಸಿದ್ದ.
ಈ ಮೋಟಾರ್ ಚಾಲೂ ಮಾಡಲು ಹೋದಾಗ ಶಾಕ್ ಹೊಡೆದಂತಾಗಿ ಗಾಬರಿಯಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಬಿದ್ದ ಜಾಗದಲ್ಲಿ ಕಾಲುವೆಯ ಆಳ ಹೆಚ್ಚಾಗಿದ್ದು, ನೀರಿನ ಒತ್ತಡವೂ ಬಹಳಷ್ಟಿರುವುದರಿಂದ ಆತ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಶವ ನೀರಿನ ಸೆಳವಿನಿಂದ ಹರಿದು ಹೋಗಿದ್ದರಿಂದ ತಕ್ಷಣಕ್ಕೆ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಬಿಜೆಎನ್ಎಲ್ ವಿರುದ್ಧ ಆರೋಪ :ಘಟನೆ ಹಿನ್ನೆಲೆ ಮಾತನಾಡಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರೇಮಸಿಂಗ್ ಚೌಹಾಣ್ ಅವರು, ಘಟನೆ ನಡೆದ ಕಾಲುವೆಯ ಸ್ಥಳ ತುಂಬಾ ಅಪಾಯಕಾರಿಯಾಗಿದೆ. ಕಾಲುವೆಯ ಐಪಿ ಸೈಡ್ ಮತ್ತು ಎಸ್ಆರ್ ಸೈಡ್ ರಸ್ತೆಯನ್ನೂ ಸರಿಯಾಗಿ ಮಾಡಿಲ್ಲ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ರೈತರು ಮತ್ತು ನಾನು ಹಲವು ಬಾರಿ ಕೆಬಿಜೆಎನ್ಎಲ್ನ ಕಾಲುವೆ ವಿಭಾಗದ ಇ ಇ ಮೋಹನ್ ಹಲಗತ್ತಿ, ಎಇ ರಾಜಕುಮಾರ ಚೌಹಾಣ್ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿಸಿದ್ದಾರೆ. ಅವರ ನಿರ್ಲಕ್ಷ್ಯದ ಪರಿಣಾಮ ಇಂದು ಒಬ್ಬ ರೈತನ ಜೀವ ಬಲಿಯಾಗಿದೆ.