ವಿಜಯಪುರ: ತೋಟಗಾರಿಕಾ ಉತ್ಪನ್ನ ಹಾಗೂ ತರಕಾರಿ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿರುವ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್, ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆಯಲ್ಲಿಯೂ ಕೂಡಾ ಮಾರಾಟಕ್ಕೆ ಅವಶ್ಯಕ ನೆರವನ್ನು ರೈತರಿಗೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳ ತೋಟಗಾರಿಕೆ, ಕೃಷಿ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಹಾಗೂ ತಹಸೀಲ್ದಾರಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ರೈತರು ಬೆಳೆದ ತೋಟಗಾರಿಕಾ ಉತ್ಪನ್ನಗಳಿಗೆ ಅದರಲ್ಲೂ ವಿಶೇಷವಾಗಿ ದ್ರಾಕ್ಷಿ, ಕಲ್ಲಂಗಡಿ, ನಿಂಬೆ, ದಾಳಿಂಬೆಗಳಿಗೆ ಅಂತರ್ ರಾಜ್ಯ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದ್ದು, ರೈತರಿಗೆ ಎಲ್ಲ ರೀತಿಯಲ್ಲಿ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲಾಕ್‍ಡೌನ್ ಜಾರಿಯಲ್ಲಿ ಇದ್ದರೂ ಕೂಡಾ ತರಕಾರಿ, ತೋಟಗಾರಿಕಾ ಉತ್ಪನ್ನಗಳ ವಹಿವಾಟಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ರೈತರು ಅಂತರ್ ರಾಜ್ಯ ಮಾರುಕಟ್ಟೆಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಬಯಸಿದಲ್ಲಿ ಅವರಿಗೆ ವಾಹನ ಪಾಸ್, ಮಾರುಕಟ್ಟೆ ಮಾಹಿತಿ, ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಎಲ್ಲ ರೀತಿಯಿಂದ ನೆರವಾಗಬೇಕು. ಅವಶ್ಯವಿದ್ದಲ್ಲಿ ವಿಶೇಷವಾಗಿ ಬೆಂಗಳೂರು, ಹೈದ್ರಾಬಾದ್ ವಿವಿಧ ಹಣ್ಣು ಮಾರುಕಟ್ಟೆಗಳಿಗೆ ಸಂಪರ್ಕ ಸಾಧಿಸಿ ನೆರವಾಗಿ ಎಂದು ಅಧಿಕಾರಿಗಳಿಗೆ ತಿಳಿಸಿದರು.