ಮುದ್ದೇಬಿಹಾಳ (ವಿಜಯಪುರ): ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಬೆಳೆ ಹಾನಿ ಸಮೀಕ್ಷೆಯ ವಿಳಂಬ ಧೋರಣೆಯ ಬಗ್ಗೆ ರೈತರು ಅಸಮಾಧಾನಗೊಂಡಿದ್ದರ ಬಗ್ಗೆ ಅ.20 ರಂದು ಈಟಿವಿ ಭಾರತ್‌ದಲ್ಲಿ ‘ಶಾಪವಾದ ಮಳೆ-ಕೈಗೂಡದ ಬೆಳೆ ಸಮೀಕ್ಷೆಯಿಂದ ಕಂಗಾಲಾದ ರೈತರು’ ಎಂಬ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದರುವ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ್ಯವನ್ನು ಚುರುಕುಗೊಳಿಸುವ ಮೂಲಕ ಜಿಲ್ಲಾಡಳಿತಕ್ಕೆ ನಿಖರ ವರದಿ ಸಲ್ಲಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಗೋನಾಳ ಪಿ.ಎನ್.ಗ್ರಾಮದಲ್ಲಿ ಬೆಳೆ ಸಮೀಕ್ಷೆ ಹಾಗೂ ಹಾನಿಯ ಅಂದಾಜಿನ ಬಗ್ಗೆ ಕೃಷಿ ಅಧಿಕಾರಿ ಆರ್.ಬಿ.ರುದ್ರವಾಡಿ, ಹಡಲಗೇರಿ ಗ್ರಾಮಲೆಕ್ಕಾಧಿಕಾರಿ ಜೈನಾಬಿ ಕಮತಗಿ ಮಾಹಿತಿ ಸಂಗ್ರಹಿಸಿದರು.
ಒಟ್ಟಾರೆ ಮಳೆ ಬಿಡುವು ಕೊಡದ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ರ ನಿರ್ದೇಶನದಂತೆ ನಾವು ಹಾನಿಯ ಅಂದಾಜನ್ನು ಲೆಕ್ಕಹಾಕುತ್ತಿದ್ದು ನಿಖರ ವರದಿಯನ್ನು ಸಲ್ಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ನಾಲತವಾಡ ಕಂದಾಯ ನಿರೀಕ್ಷಕ ಎನ್.ಬಿ.ದೊರೆ ಮಾಹಿತಿ ನೀಡಿದ್ದಾರೆ.
ತಾಲೂಕಿನ ಸರೂರ ಎಲ್.ಟಿ.ಯಲ್ಲಿ ಹಾನಿಯಾದ ಜಮೀನುಗಳ ಸರ್ವೆ ಕಾರ್ಯವನ್ನು ಉಪ ತಹಸೀಲ್ದಾರ್ ಜಿ.ಎನ್.ಕಟ್ಟಿ,ಕಂದಾಯ ನಿರೀಕ್ಷಕ ನಿಂಗಪ್ಪ ಮಾವಿನಮಟ್ಟಿ(ದೊರೆ),ಗ್ರಾಮಲೆಕ್ಕಾಧಿಕಾರಿ ಎಂ.ಸಿ.ನದಾಫ,ಕೃಷಿ ಇಲಾಖೆಯ ಅಧಿಕಾರಿಗಳು ಹಾನಿಯ ಮಾಹಿತಿಯನ್ನು ರೈತರಿಂದ ಕಲೆ ಹಾಕಿದರು.
ತಾಲೂಕಿನ ಕುಂಟೋಜಿ, ಅಬ್ಬಿಹಾಳ ಗ್ರಾಮದಲ್ಲಿ ಶಿರಸ್ತೇದಾರ ವೀರೇಶ ತೊನಶ್ಯಾಳ, ಕೃಷಿ ಅಧಿಕಾರಿ ಎ.ಬಿ.ಇಟಗಿ,ಗ್ರಾಮಲೆಕ್ಕಾಧಿಕಾರಿ ಅನುಪಮಾ ಪೂಜಾರಿ ನೇತೃತ್ವದ ತಂಡ ಬೆಳೆ ಹಾನಿ ಸಮೀಕ್ಷೆ ನಡೆಸಿತು. ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ರೈತರ ಮಾಹಿತಿಯಂತೆ ವರದಿಯನ್ನು ದಾಖಲಿಸಿಕೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುತ್ತದೆ. ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ಶೇ.70ರಷ್ಟು ಬೆಳೆ ಹಾನಿಯಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿ ಅನುಪಮಾ ಪೂಜಾರಿ ಮಾಹಿತಿ ನೀಡಿದ್ದಾರೆ.