ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ರೌಡಿಶೀಟರ್ವೋರ್ವನ ಬರ್ಬರ ಹತ್ಯೆ ನಡೆದಿದೆ. ಮಂಗಳವಾರ ಹಾಡಹಗಲೇ ನಡುರಸ್ತೆಯಲ್ಲಿ ಈ ಘಟನೆ ನಡೆದಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಜಿಲ್ಲೆಯ ಆಲಮೇಲ ಸಮೀಪದ ದೇವರನಾವದಗಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದ ರೌಡಿಶೀಟರ್ನನ್ನು ಮಾಳಪ್ಪ ಯಮನಪ್ಪ ಮೇತ್ರಿ (40) ಎಂದು ಗುರುತಿಸಲಾಗಿದೆ. ಈತನನ್ನು ದುರ್ಷ್ಕಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಮಾಳಪ್ಪ ಮೇತ್ರಿ ಮೇಲೆ ಶಸ್ತ್ರಾಸ್ತ್ರ ಕಾಯ್ದೆ, ಕಂಟ್ರಿ ಪಿಸ್ತೂಲ್ ಹೊಂದಿರುವ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾದ ಮೇಲೆ ಪೊಲೀಸರು ಆತನ ವಿರುದ್ಧ 2002ರಲ್ಲಿ ರೌಡಿಶೀಟರ್ ಕೇಸ್ ಹಾಕಿದ್ದರು. ಈತನ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ಹಳೇ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಭೀಮಾ ತೀರ ಶಾಂತವಾಗಲು ಶಾಂತಿ ಸಭೆ ನಡೆದಿತ್ತು: ಅಂದಿನ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಅವರು ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದರು. ನಂತರ ಮತ್ತೊಮ್ಮೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆದ ಮೇಲೆ ಚಡಚಣಕ್ಕೆ ಬಂದಿದ್ದರು. ಅಲ್ಲಿಯೂ ಶಾಂತಿ ಸಭೆ ನಡೆಸಿ ಹಳೇ ದ್ವೇಷ ಬಿಟ್ಟು ಮನುಷ್ಯರಾಗಿ ಬಾಳಿ ಎಂದು ಎಚ್ಚರಿಕೆ ನೀಡಿದ್ದರು. ಎರಡು ಕುಟುಂಬಗಳ ದ್ವೇಷ ಅಂತ್ಯವಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಆದರೂ ಮತ್ತೆ ಕೊಲೆ ನಡೆದಿರುವುದು ಆತಂಕ ಮೂಡಿಸಿದೆ.