ವಿಜಯಪುರ: ಜಿಲ್ಲೆಯಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ಒಂದು ವಾರ ಕಳೆದಿದ್ದು, ಇಲ್ಲಿಯವರೆಗೆ 2,611 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಕೊರೊನಾತಂಕ: 12 ವಿದ್ಯಾರ್ಥಿಗಳು, 13 ಉಪನ್ಯಾಸಕರಿಗೆ ಕೊರೊನಾ
ವಿದ್ಯಾರ್ಥಿಗಳಿಗೆ ಅಥವಾ ಉಪನ್ಯಾಸಕರಿಗೆ ಜ್ವರ, ಕೆಮ್ಮು ಇದ್ದರೆ ಕಾಲೇಜಿಗೆ ಬರಬಾರದು. ಅಂತವರು ಕಡ್ಡಾಯವಾಗಿ ಸ್ವ್ಯಾಬ್ ಟೆಸ್ಟ್ಗೆ ಒಳಗಾಗಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿ ನಂತರ ಕಾಲೇಜಿಗೆ ಬರಬೇಕೆಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಸಲಹೆ ನೀಡಿದ್ದಾರೆ.
ಪರೀಕ್ಷೆಗೆ ಒಳಗಾದವರಲ್ಲಿ 12 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ 13 ಜನರಿಗೆ ಸೋಂಕು ತಗುಲಿದೆ. ಸದ್ಯ ರೋಗಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಜತೆ ಸಂಪರ್ಕದಲ್ಲಿದ್ದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಪ್ರತಿ ಕಾಲೇಜುಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜತೆ ಪ್ರತಿ ದಿನ ಕಾಲೇಜು ಆರಂಭವಾಗುವ ಮುನ್ನ ಕೊಠಡಿಗಳನ್ನು ಸ್ಯಾನಿಟೈಸರ್ ಮೂಲಕ ಶುಚಿಗೊಳಿಸಿ ನಂತರ ಕ್ಲಾಸ್ ಆರಂಭಿಸಬೇಕು ಎಂಬುನ್ನು ಕಾಲೇಜು ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು.