ಮುದ್ದೇಬಿಹಾಳ: 30 ಸಾವಿರ ಕೋಟಿ ರೂ. ಜಿಎಸ್‌ಟಿ ಪಾಲನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡಬೇಕು. ಆದರೆ, ನಮ್ಮ 26 ಜನ ಎಂಪಿಗಳಿಗೆ ಮೋದಿ ಬಳಿ ಮಾತನಾಡುವ ಧೈರ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಸುದ್ದಿಗೋಷ್ಠಿ.. ಪಟ್ಟಣದಲ್ಲಿ ಅವಳಿ ಜಿಲ್ಲೆಯ ಮುಸ್ಲಿಂ ಸಮಾಜದ ಮುಖಂಡರ ಸಮಾಲೋಚನಾ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಪಾಲನ್ನು ರಾಜ್ಯಕ್ಕೆ ತರುತ್ತಿಲ್ಲ.
ಕರ್ನಾಟಕ ರಾಜ್ಯದ ಭಂಡಾರ ತುಂಬಿರಬೇಕು. ಆದರೆ, ಯಡಿಯೂರಪ್ಪನವರಿಗೆ ಅವಕಾಶ ಸಿಕ್ಕಿದ್ರೂ ಕೂಡ ತೆರಿಗೆ ಸಂಗ್ರಹಿಸುವ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.
ನಾನು ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದ ಅವಧಿಯಲ್ಲಿ ಖಜಾನೆಯಲ್ಲಿ ಸಮರ್ಪಕ ಅನುದಾನ ಇತ್ತು. ತಮಿಳುನಾಡು, ಮಧ್ಯಪ್ರದೇಶ, ಉತ್ತರಪ್ರದೇಶದವರು ಕೇಂದ್ರದಿಂದ ಹಣ ತರುತ್ತಿದ್ದಾರೆ. ನಮ್ಮಲ್ಲಿ ಪ್ರವಾಹ, ಅತಿವೃಷ್ಟಿ ಸಂಭವಿಸಿ ಮನೆಗಳು ಬಿದ್ದು ಹೋದ್ರೂ ಸಹ ಇನ್ನೂ ಸೂಕ್ತ ಪರಿಹಾರ ನೀಡಿಲ್ಲ.
ದೇಶದ ಆರ್ಥಿಕ ಪರಿಸ್ಥಿತಿ ನೆಲಕ್ಕಚ್ಚಿದ್ದು, ಪೆಟ್ರೋಲ್ ದರ ಏರಿಕೆಯಾಗುತ್ತಲೇ ಇದೆ ಎಂದರು. ಈ ವೇಳೆ ವಕೀಲ ಸಂಘದ ಅಧ್ಯಕ್ಷ ಎಂ.ಹೆಚ್.ಕ್ವಾರಿ, ವಕೀಲರಾದ ಎಂ.ಹೆಚ್.ಹಾಲಣ್ಣವರ, ಕಾಶೀಮ ಪಟೇಲ್ ಮೂಕಿಹಾಳ, ಕೆ ಎಂ ರಿಸಾಲ್ದಾರ್, ಎಂ ಆರ್ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.