ಕರ್ನಾಟಕ

karnataka

ETV Bharat / state

ಮೀಸಲಾತಿ ವಿಚಾರ.. ಡಿಕೆಶಿ ಹೇಳಿಕೆಗೆ ಖಡಕ್​ ಉತ್ತರ ಕೊಟ್ಟ ಯತ್ನಾಳ್​ - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​

ಮೀಸಲಾತಿ ವಿಚಾರವಾಗಿ ಹೇಳಿಕೆ ನೀಡಿದ್ದ ಡಿಕೆಶಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವ್ಯಂಗ್ಯವಾಗಿ ಟೀಕಿಸಿದ್ದಾರೆ.

BJP MLA Basan Gowda Patil Yatnal
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

By

Published : Mar 26, 2023, 5:11 PM IST

Updated : Mar 26, 2023, 7:58 PM IST

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ವಿಜಯಪುರ:ಮೀಸಲಾತಿ ವಿಚಾರವಾಗಿ ಬಿಜೆಪಿ ಸರ್ಕಾರ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀ, ಕೂಡಲಸಂಗಮ ಜಯಮೃತ್ಯುಂಜಯ ಶ್ರೀ ಸೇರಿ ನಾಲ್ವರು ಸ್ವಾಮೀಜಿಗಳಿಗೆ ಪದೇ ಪದೇ ಫೋನ್ ಮಾಡಿ ಒತ್ತಡ ಹೇರಿ ಸರ್ಕಾರ ನೀಡುವ ಮೀಸಲಾತಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು‌ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್​ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರು ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾರು ಗೂಂಡಾ ನಾಯಕರಿಲ್ಲ, ಅದು ನಮ್ಮ ಸಂಸ್ಕೃತಿ ಸಹ ಅಲ್ಲ, ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು. ಎಸ್ ಟಿ, ಎಸ್ ಸಿ ಅವರಿಗೆ ಹೆಚ್ಚುವರಿಯಾಗಿ ನಿನ್ನೆ ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ನಾಯಕತ್ವದ ಸರ್ಕಾರ ಮೀಸಲಾತಿ ನೀಡಿದೆ. ಸಾಮಾಜಿಕ ನ್ಯಾಯದಡಿ ಬೊಮ್ಮಾಯಿ ಮೀಸಲಾತಿ ವಿಂಗಡಣೆ ಮಾಡಿದ್ದಾರೆ ಎಂದು ಹೇಳಿದರು.

2ಎ ದಲ್ಲಿ ಒಟ್ಟು 102 ಜಾತಿಗಳಿವೆ. ಹೀಗಾಗಿ 3ಬಿ ಯಲ್ಲಿದ್ದ ಮರಾಠ, ಜೈನ್, ಲಿಂಗಾಯತ ಸೇರಿ ಹಲವು ಜಾತಿಗಳನ್ನು 2ಡಿ ಗೆ ಸೇರ್ಪಡೆ ಮಾಡಲಾಗಿದೆ ಎಂದರು. ಎಲ್ಲ ಸಮುದಾಯಗಳಿಗೂ ಮೀಸಲಾತಿ ದೊರೆಯಲಿ ಎನ್ನುವ ಉದ್ದೇಶದಿಂದ ಮೀಸಲಾತಿ ನೀಡಲಾಗಿದೆ. ಡಿಕೆಶಿ ಹೇಳಿಕೆಗೆ ಏನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ಖುದ್ದು ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಬಗ್ಗೆ ಆಸಕ್ತಿ ವಹಿಸಿ ಸಿಎಂ ಬೊಮ್ಮಾಯಿಗೆ ಸೂಚನೆ ನೀಡಿದ ಮೇಲೆ ಮೀಸಲಾತಿ ಪ್ರಕಟಗೊಂಡಿದೆ ಎಂದರು. ಮೀಸಲಾತಿ ಸಾಮಾಜಿಕ ನ್ಯಾಯದಡಿ ನಡೆದಿದೆ‌ ಇದರಿಂದ ಕಾಂಗ್ರೆಸ್ ಮುಖಂಡರು ಸೋಲಿನ‌ ಭೀತಿಯ ಹತಾಶೆಯಲ್ಲಿದ್ದಾರೆ. ನಮ್ಮದು ಧಮ್ಕಿ ಕೊಡುವ ಸಂಸ್ಕೃತಿಯ ಪಕ್ಷವಲ್ಲ. ಪ್ರಧಾನಿ ಮೋದಿ ಎರಡು ದಿನದಲ್ಲಿ ಮೀಸಲಾತಿ ಸಿದ್ದಪಡಿಸಲು ಸೂಚಿಸಿದ್ದರು. ಸುದೈವ ಕಾಂಗ್ರೆಸ್ ಎಜೆಂಟ್ನೊಬ್ಬರು ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದರು. 2ಸಿ ಮತ್ತು 2ಡಿ ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಹೈಕೋರ್ಟ್ ತಿರಸ್ಕಾರ ಮಾಡಿ ಮೀಸಲಾತಿ ಜಾರಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದು‌ ಕಾಂಗ್ರೆಸ್ ಹತಾಶೆ ಭಾವನೆಗೆ ಕಾರಣವಾಗಿದೆ ಎಂದರು.‌

ಮೀಸಲಾತಿ ಒಂದೇ ಕಡೆ ಲಾಭ ದೊರೆಯಲಿ:ಮುಸ್ಲಿಂರ ಮೀಸಲಾತಿ ಕಡಿತ ವಿಚಾರ ಮಾತನಾಡಿದ ಶಾಸಕ ಯತ್ನಾಳ್​, ಮುಸ್ಲಿಂರು ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಒಂದೇ ಕಡೆಗೆ ಲಾಭ ಸಿಗಬೇಕು, ಮೀಸಲಾತಿ ಇವರೊಬ್ಬರಿಗೆನಾ ಎಂದು ಯತ್ನಾಳ್​ ಪ್ರಶ್ನಿಸಿದರು. ದಲಿತರಿಗೆ ಇನ್ನೂ 2 ಪರ್ಸೆಂಟ್ ಮೀಸಲಾತಿ ಹೆಚ್ಚು ಮಾಡ್ತೀವಿ. ದಲಿತರಿಗೆ ಈಗ 17 ಮಾಡಿದ್ದೇವೆ. ಮುಂದೆ ನರೇಂದ್ರ ಮೋದಿ 21 ಪರ್ಸೆಂಟ್ ಮಾಡ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡ್ತೀವಿ, ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಐತಿಹಾಸಿಕ ನಿರ್ಣಯ ದಿಂದ ಕಾಂಗ್ರೆಸ್ ಕಂಗಾಲಾಗಿದೆ, ಕಾಂಗ್ರೆಸ್ ಥರಥರ ಎಂದು ಅಲುಗಾಡಿ ಹೋಗಿದೆ ಎಂದ ಅವರು, ಡಿಕೆಶಿ ತಾಕತ್ತಿದ್ದರೆ ಮೀಸಲಾತಿ ರದ್ದು ಮಾಡ್ತೀವಿ ಎಂದು ಚುನಾವಣೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು. ಮೀಸಲಾತಿ ರದ್ದು ಮಾಡ್ತೀವಿ ಎಂದ್ರೆ ಕಾಂಗ್ರೆಸ್ ಡೆಪಾಸಿಟ್ ರದ್ದಾಗುತ್ತೆ ಎಂದು ಯತ್ನಾಳ್​ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ- ಯತ್ನಾಳ್:ಮಾಜಿ ಸಿಎಂ ಸಿದ್ದ ರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, 5 ವರ್ಷ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರ ಬಾರದಿತ್ತು ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡಲ್ಲ, ಸಿದ್ದರಾಮಯ್ಯರನ್ನು ಬಲಿಪಶು ಮಾಡಲಿದ್ದಾರೆ ಎಂದು ಯತ್ನಾಳ್​ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಸಮುದಾಯದವರು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಬಾರದು. ನಾಳೆ ಡಿಕೆಶಿಯನ್ನು ಸಿಎಂ ಮಾಡಿದರೆ ನಾವು, ನೀವು ಸೇರಿಯೇ ಸಾಯುತ್ತೇವೆ. ಪರೋಕ್ಷವಾಗಿ ಡಿಕೆಶಿಯನ್ನು ಯತ್ನಾಳ್​ ತಿವಿದರು. ಅತಿಯಾದ ಮುಸ್ಲಿಂ ತುಷ್ಟೀಕರಣ ಸಿದ್ದರಾಮಯ್ಯ ಈ ಸ್ಥಿತಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಒನ್ ಸೈಡ್ ಹೋಗಿದ್ದಾರೆ. ಎಲ್ಲ ಜನಾಂಗಗಳನ್ನು ಪ್ರೀತಿ ಮಾಡಬೇಕು, ಒಂದೇ ಜನಾಂಗವನ್ನು ತಲೆ ಮೇಲೆ ಕೂರಿಸಿಕೊಂಡರೆ, ಉಳಿದವರು ಬುದ್ಧಿ ಕಲಿಸುತ್ತಾರೆ ಎಂದು ಯತ್ನಾಳ್​ ಹರಿಹಾಯ್ದರು.

ವರುಣಾ ಸಹ ಸುಲಭವಲ್ಲ- ಯತ್ನಾಳ್​:ಸಿದ್ದರಾಮಯ್ಯಗೆ ವರುಣಾ ಕ್ಷೇತ್ರ ಅಷ್ಟು ಸುಲಭವಲ್ಲ, ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಸುಲಭ ಇಲ್ಲ ಎಂದ ಯತ್ನಾಳ್​ ಭವಿಷ್ಯ ನುಡಿದರು. ಸೋಶಿಯಲ್ ಇಂಜಿನಿಯರಿಂಗ್ ಅಷ್ಟು ಸರಿ ಇಲ್ಲ, ಮೊದಲು ಜನ ಮುಗ್ದರಿದ್ದರು ಓಟು ಹಾಕುತ್ತಿದ್ದರು. ಈಗ ಯಾರು ಏನು ಮಾಡಿದ್ದಾರೆ ಅನ್ನೋ ಲಿಸ್ಟ್ ಜನರ ಬಳಿ ಇದೆ ಎಂದರು.

ನಮ್ಮಲ್ಲಿ ಸೋತವರು ಪ್ರಚಾರ ಸಮಿತಿಯಲ್ಲಿದ್ದಾರೆ-ಯತ್ನಾಳ್:ಬಿಜೆಪಿ ಪ್ರಚಾರ ಸಮಿತಿಯಲ್ಲಿ ಯತ್ನಾಳ್​ಗೆ ಅವಕಾಶ ನೀಡದ ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ನಮ್ಮಲ್ಲಿ ಸೋತವರು ಪ್ರಚಾರ ಸಮಿತಿಯಲ್ಲಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಗೆದ್ದಂತ ನಮ್ಮನ್ನು ಹೊರಗೆ ಇಟ್ಟಿದ್ದಾರೆ, ಆದರೆ ನಾನು ಜನರಿಗೆ ಬೇಕಾಗಿದ್ದೇನೆ. ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಯತ್ನಾಳ್​ನ್ನು ಕರೆದುಕೊಂಡು ಬಂದರೆ ಮತ ಹಾಕುತ್ತೇವೆಂದು ಜನರು ಹೇಳುತ್ತಿದ್ದಾರೆ. ನಿನ್ನೆ ಯಮಕನಮರಡಿ, ಮೊನ್ನೆ ಸೇಡಂ ಹೋಗಿದ್ದೇ. ಎಲ್ಲಿ ಪ್ರೀತಿಯಿಂದ ಕರೆಯುತ್ತಾರೆ ಅಲ್ಲಿ ಹೋಗುತ್ತೇನೆ. ಇದೆಲ್ಲ ನಮ್ಮ ಹೈಕಮಾಂಡ್ ಗೆ ಎಲ್ಲಾ ಗೊತ್ತಾಗಿದೆ, ಬಸನಗೌಡರ ಜನಪ್ರೀತಿ ಏನೆಂಬುದು ಗೊತ್ತಾಗಿದೆ ಎಂದು ವಿಶ್ವಾಸ ಹೊರಹಾಕಿದರು.

ಮೀಸಲಾತಿ ಆಗಬೇಕೆಂದರೆ ನನ್ನ ದೊಡ್ಡ ಕೊಡುಗೆ ಇದೆ ಎಂದ ಯತ್ನಾಳ್, ನಾ ಎಲ್ಲಾ ಅಧಿಕಾರ ತ್ಯಾಗ ಮಾಡಿದ್ದಕ್ಕಾಗಿ ಎಲ್ಲಾ ಸಮಾಜಕ್ಕೆ ಮೀಸಲಾತಿ ಸಿಕ್ಕಿದೆ. ನನಗೆ ಅಮಿತ್ ಶಾ ಅವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕರೆದು ಸಭೆ ಮಾಡಿದ್ದಾರೆ. ಅಲ್ಲದೆ ಕೇಂದ್ರ ಆರೋಗ್ಯ ಸಚಿವರು, ಶೋಭಾ ಕರಂದ್ಲಾಜೆ ಅವರು ಮಾತನಾಡಿದರು. ಪ್ರಧಾನ ಮಂತ್ರಿಗಳ ಕಚೇರಿಯಿಂದ ನಿರಂತರ ಸಂಪರ್ಕವಿತ್ತು. ಮೀಸಲಾತಿ ನೀಡುವ ವಿಚಾರದಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ನೇರವಾಗಿ ಸಿಎಂ ಗೆ ಸೂಚನೆ ನೀಡಲಾಗಿತ್ತು ಎಂದರು.

ಮೀಸಲಾತಿ ಘೋಷಣೆ ವಿಚಾರದಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವು ದೊಡ್ಡದಿದೆ, ಇದೇ ವಿಚಾರದಲ್ಲಿ ಅಮಿತ್ ಶಾ ಹಾಗೂ ಬಿಎಲ್ ಸಂತೋಷ್ ಅವರು ಕೂಡ ಮಾತನಾಡಿದ್ದಾರೆ ಎಂದರು. ನಾವು ಯಾವುದೇ ಸಮಾಜಕ್ಕೂ ಅನ್ಯಾಯ ಮಾಡಿಲ್ಲ ಎರಡು ಮೂರು ಕಡೆ ಲಾಭ ಪಡೆಯುತ್ತಿದ್ದ ಸಮಾಜಕ್ಕೆ ಒಂದೇ ಕಡೆ ಮೀಸಲಾತಿ ಸಿಗುವ ಹಾಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದರು. ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದವರು ವಾಪಸ್ ಕಾಂಗ್ರೆಸ್​ಗೆ ಹೋಗುತ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಯತ್ನಾಳ್​, ಅವೆಲ್ಲ ಊಹಾ ಪೋಹಗಳಿರುತ್ತವೆ. ಅದರ ಬಗ್ಗೆ ನನಗೆ ಗೊತ್ತಿಲ್ಲ, ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದವರು ಇಲ್ಲಿ ಆರಾಮವಾಗಿ ಇದ್ದಾರೆ, ಇಷ್ಟು ಸ್ವತಂತ್ರ ಯಾವ ಪಕ್ಷದಲ್ಲಿ ಇದೆ?.

ನಾವೆಲ್ಲ ತ್ಯಾಗ ಮಾಡಿ ಅವರಿಗೆ ಸಚಿವರಾಗಲು ಅವಕಾಶ ನೀಡಿದ್ದೇವೆ, ಅವರು ಅಧಿಕಾರವನ್ನು ಅನುಭವಿಸಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿದ್ದಾರೆ ನಾನು ಸಚಿವನಾಗಲಿಲ್ಲಾ ಎಂಬ ದುಃಖ ನನಗಿಲ್ಲ. ಕಾಂಗ್ರೆಸ್ ನಿಂದ ಬಂದವರು ಜೀವನದಲ್ಲಿ ಎಂದೂ ಸಚಿವರಾಗುತ್ತಿರಲಿಲ್ಲ. ನಮ್ಮಲ್ಲಿ ಬಂದ ಕಾರಣದಿಂದ ಅವರು ಮಂತ್ರಿಗಳಾಗಿದ್ದಾರೆ ಎಂದರು. ಅವರು ಖುಷಿಯಲ್ಲಿದ್ದರೆ ನಾವು ಖುಷಿಯಾಗಿದ್ದಂತೆ ಎಂದು ತಿಳಿಸಿದರು.

ವರುಣಾ ಕ್ಷೇತ್ರದಲ್ಲೂ ಬಿಜೆಪಿ ಕಾರ್ಯಕರ್ತರಿದ್ದಾರೆ-ಯತ್ನಾಳ್​:ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುದಾದರೆ ಅವರ ವಿರುದ್ಧ ಬಿಜೆಪಿಯಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಬಹುದಾ? ಎನ್ನುವ ಪ್ರಶ್ನೆಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ, ವರುಣಾದಲ್ಲಿ ಬಿಜೆಪಿ ಕಾರ್ಯಕರ್ತರು ಇಲ್ಲವೇ? ಅಲ್ಲಿಯು ಉತ್ತಮ ಮುಖಂಡರು ಇದ್ದಾರೆ. ಅವರಲ್ಲಿ ಯಾರನ್ನಾದರೂ ಕಣಕ್ಕೆ ಇಳಿಸಬಹುದು ಎನ್ನುವ ಮೂಲಕ ಮತ್ತೊಮ್ಮೆ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ:ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸುವುದಿಲ್ಲ: ಅರುಣ್ ಸಿಂಗ್

Last Updated : Mar 26, 2023, 7:58 PM IST

ABOUT THE AUTHOR

...view details