ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಬೇಕು ಎಂಬ ವಚನಾನಂದ ಶ್ರೀಗಳ ಹೇಳಿಕೆಗೆ ಶಾಸಕ ಬಸನಗೌಡ ಯತ್ನಾಳ್ ಗರಂ ಆಗಿದ್ದಾರೆ.
ವಚನಾನಂದ ಶ್ರೀ ಮತ್ತು ಶಾಸಕ ನಿರಾಣಿ ವಿರುದ್ಧ ಎಂಎಲ್‌ಎ ಬಸನಗೌಡ ಯತ್ನಾಳ್ ಕಿಡಿ.. ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್ ನಿರಾಣಿಯನ್ನು ಬಿಜೆಪಿಗೆ ತಂದವರು ನಾನು ಹಾಗೂ ಶ್ರೀಕಾಂತ ಕುಲಕರ್ಣಿ,ಅವರನ್ನ ಬೃಹತ್ ಕೈಗಾರಿಕೆ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಕಾರ್ಯಕ್ರಮಕ್ಕೆ ಕರಿಸಿ ನಿರಾಣಿಯನ್ನು ಮಂತ್ರಿಮಾಡಬೇಕು ಎಂದು ಹೇಳುತ್ತಿರೋದನ್ನ ನಾನು ಖಂಡಿಸುತ್ತೇನೆ. ಸ್ವಾಮೀಜಿಗಳೇ ನಿಮ್ಮ ನಡುವಳಿಕೆಯಿಂದ ಪಂಚಮಸಾಲಿ ಸಮಾಜಕ್ಕೆ ಅಪಮಾನವಾಗಿದೆ. ಈ ರೀತಿ ನಿಮ್ಮ ವರ್ತನೆ ಮುಂದುವರೆದರೆ ಯಾವ ಶಾಸಕರೂ ಸುಮ್ನೆ ಕೂರುವುದಿಲ್ಲ ಎಂದು ವಚನಾನಂದ ಸ್ವಾಮೀಜಿಗೆ ಯತ್ನಾಳ ಎಚ್ಚರಿಸಿದರು.
ಸ್ವಾಮೀಜಿಗಳಿರಲಿ, ಬೇರೆ ಯಾರೇ ಇರಲಿ ಸಿಎಂಗೆ ಗೊಡ್ಡು ಬೆದರಿಕೆ ಹಾಕುವಂತಿಲ್ಲ. ಸ್ವಾಮೀಜಿಗಳು ಏನು ಬೇಕಾದ್ದು ಮಾತನಾಡಲು ಜನರಲ್ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ. ಮಠಾಧೀಶರಾಗಿ ಗೌರವಯುತವಾಗಿ ಇರ್ಬೇಕು ಎಂದರು.
ಸರ್ಕಾರ ಮೂರುವರೆ ವರ್ಷ ಇರ್ತದೆ. ಯಡಿಯೂರಪ್ಪ ಸಿಎಂ ಆಗಿರ್ತಾರೆ. ಮುಖ್ಯಮಂತ್ರಿಗಳು ರಾಜನಿದ್ದಂತೆ. ರಾಜನಿಗೆ ಮಠಾಧೀಶರು ಯಾರೂ ಕೂಡ ಬೆದರಿಕೆ ಹಾಕಬಾರದು ಎಂದರು. ಪ್ರವಾಹ ಸಮಯದಲ್ಲಿ ಸ್ವಾಮೀಜಿ ಎಲ್ಲಿ ಹೋಗಿದ್ರು. ಸ್ವಾಮೀಜಿಯಾಗಿ ಧರ್ಮ ಬೋಧನೆ ಮಾಡಲಿ. ನಾನು ಯಾವ ಸ್ವಾಮೀಜಿ ಬಳಿ ಹೋಗಿ ಮಂತ್ರಿ ಕೊಡಿಸಿ ಎಂದು ಹೋಗಿಲ್ಲ. ನನಗೆ ಅರ್ಹತೆ ಇದ್ರೆ ಮಂತ್ರಿ ಮಾಡ್ರಿ, ಇಲ್ಲದಿದ್ರೆ ಬೇಡ, ನನ್ನ ಅರ್ಹತೆ ಏನು ಎಂಬುದು ವಾಜಪೇಯಿ ಅವರಿಗೆ ಗೊತ್ತಿತ್ತು. ವಿಜಯಪುರ ಜನತೆಗೂ ಕೂಡ ಗೊತ್ತಿದೆ ಎಂದರು.