ಕರ್ನಾಟಕ

karnataka

By

Published : Aug 25, 2020, 7:08 PM IST

Updated : Aug 25, 2020, 10:19 PM IST

ETV Bharat / state

ಸಂಸಾರದ ಹೊಣೆ ಹೊತ್ತಿದ್ದ ಮಗ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿ: ಸೆಕ್ಯುರಿಟಿ ಸಿಬ್ಬಂದಿಯ ಕುಟುಂಬ ಬೀದಿಪಾಲು

ಸಿಂದಗಿ ಪಟ್ಟಣದಲ್ಲಿ ಸೋಮವಾರ ರಾತ್ರಿ ದರೋಡೆಕೋರರಿಂದ ಹತ್ಯೆಗೊಳಗಾದ ಎಟಿಎಂ ಭದ್ರತಾ ಸಿಬ್ಬಂದಿಯ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಹೆಣ್ಣು ಹುಡುಕಿ ಬೇಗನೆ ಮದುವೆ ಮಾಡುವ ಚಿಂತನೆಯಲ್ಲಿದ್ದ ಮೃತ ವ್ಯಕ್ತಿಯ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ATM Security Guard Murder
ಮೃತ ರಾಹುಲ್ ಖೀರು ರಾಠೋಡ್

ವಿಜಯಪುರ:ಜಿಲ್ಲೆಯ ಸಿಂದಗಿ ಪಟ್ಟಣದ ಎಟಿಎಂ ದರೋಡೆ ಪ್ರಕರಣವು ಈಗ ಒಂದು ಕುಟುಂಬವನ್ನು ಬೀದಿಗೆ ತಳ್ಳಿದೆ. ದರೋಡೆಗೆ ಬಂದಿದ್ದ ಖದೀಮರು ನಡೆಸಿದ ಸೆಕ್ಯುರಿಟಿ ಸಿಬ್ಬಂದಿಯ ಹತ್ಯೆಯಿಂದ ಆತನ ಕುಟುಂಬವೇ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ಸಂಸಾರದ ಬಂಡಿ ನಡೆಸುತ್ತಿದ್ದ ಯುವಕ ದುರ್ಷ್ಕಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮದುವೆಯಾಗಿ ಸುಖವಾಗಿರಬೇಕೆಂದುಕೊಂಡಿದ್ದ ಮಗ ಇದೀಗ ಮಸಣ ಸೇರಿದನಲ್ಲಾ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.

ಮೃತ ರಾಹುಲ್ ಖೇರು ರಾಠೋಡ್ ತಾಯಿಯ ರೋದನೆ

ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ:

ಪಟ್ಟಣದ ಶಹಾಪೂರ ಕಾಂಪ್ಲೆಕ್ಸ್​ನಲ್ಲಿರುವ ಐಸಿಐಸಿಐ ಬ್ಯಾಂಕ್​​ನಲ್ಲಿ ಸೋಮವಾರ ತಡರಾತ್ರಿ ಮೂವರು ದರೋಡೆಕೋರರು ಎಟಿಎಂನಲ್ಲಿದ್ದ ಹಣ ಎಗರಿಸಲೆಂದು ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ದಾಳಿ ಮಾಡಿದ್ದರು. ಅದೇ ಎಟಿಎಂ ಬಳಿ ಮಲಗಿದ್ದ ಸೆಕ್ಯುರಿಟಿ ಗಾರ್ಡ್ ರಾಹುಲ್ ಖೇರು ರಾಠೋಡ್​ (24)ಅನ್ನು ಮೊದಲು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಎಟಿಎಂ ಯಂತ್ರವನ್ನು ಅದೇ ಸುತ್ತಿಗೆಯಿಂದ ಒಡೆಯಲು ಯತ್ನಿಸಿದ್ದಾರೆ. ಅಷ್ಟರೊಳಗಾಗಿ ಬ್ಯಾಂಕ್ ಸೈರನ್ ಕೂಗಿದ್ದಕ್ಕೆ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.

ಸಂಸಾರದ ಹೊಣೆ ಹೊತ್ತಿದ್ದ ಮಗ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿ... ದಿಕ್ಕು ತೋಚದಂತಾದ ಸೆಕ್ಯುರಿಟಿ ಸಿಬ್ಬಂದಿಯ ಕುಟುಂಬ

ಸಂಸಾರದ ಭಾರ ಹೊತ್ತ ಸಹೋದರ:

ಪೊಲೀಸರು ಬಂದು ನೋಡಿದಾಗ ಸೆಕ್ಯುರಿಟಿ ಗಾರ್ಡ್ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಮೃತ ಸೆಕ್ಯುರಿಟಿ ಗಾರ್ಡ್ ಮೂಲತಃ ಮದಭಾವಿ ತಾಂಡಾ ಗ್ರಾಮದವನು. ಪದವೀಧರ ಸಹ ಆಗಿದ್ದ. ಒಳ್ಳೆಯ ಉದ್ಯೋಗ ದೊರೆಯುವವರೆಗೆ ಮನೆ ನಡೆಸಲು ಐಸಿಐಸಿಐ ಬ್ಯಾಂಕ್​ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ನಿತ್ಯ ಊರಿಗೆ ಹೋಗಿಬರುವುದಾಗುವುದಿಲ್ಲ ಎಂದು ಸಿಂದಗಿಯಲ್ಲಿ ಮನೆ ಮಾಡಿಕೊಂಡಿದ್ದ. ಅಲ್ಲಿಯೇ ತನ್ನ ಸಹೋದರನನ್ನು ಓದಿಸುತ್ತಿದ್ದ. ಮನೆಯಿಂದ ತಂದ ಊಟವನ್ನೇ ಎರಡು ಮೂರು ದಿನ ಮಾಡಿ ತಂದೆ-ತಾಯಿ ಹಾಗೂ ಸಹೋದರನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಮೃತ ರಾಹುಲ್ ಖೇರು ರಾಠೋಡ್

ಕನ್ಯೆ ಹುಡುಕುತ್ತಿದ್ದರು:

ರಾಹುಲ್​ನ ಪೋಷಕರು ಪ್ರತಿ ವರ್ಷ ದುಡಿಯಲು ಪಕ್ಕದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದರು. ಈ ವರ್ಷ ಕೊರೊನಾದಿಂದ ಗ್ರಾಮದಲ್ಲಿಯೇ ಉಳಿದಿದ್ದರು. ಹೀಗಾಗಿ ಸಂಸಾರದ ಸಂಪೂರ್ಣ ಹೊಣೆ ರಾಹುಲ್​ ಹೆಗಲಮೇಲೆತ್ತು. ಇತನ ಓಡಾಟ, ಊಟದ ಸಮಸ್ಯೆ ಅರಿತ ಆತನ ಕುಟುಂಬದವರು ಮದುವೆ ಮಾಡಬೇಕೆಂದು ಕನ್ಯೆ ಹುಡುಕುತ್ತಿದ್ದರು. ಕಳೆದ ಎರಡು ವರ್ಷದಿಂದ ತಮ್ಮ ತಾಂಡಾದಲ್ಲಿ ತಕ್ಕಮಟ್ಟಿಗೆ ಓದಿದ ಹುಡುಗಿಯನ್ನು ಹುಡುಕಿ ಮದುವೆ ಮಾಡಿ ಮತ್ತೆ ಮಹಾರಾಷ್ಟ್ರಕ್ಕೆ ದುಡಿಯಲು ಹೋಗಬೇಕೆಂದುಕೊಂಡಿದ್ದರು. ಕನ್ಯೆ ಹುಡುಕಿ ಬೇಗನೆ ಮದುವೆ ಮಾಡುವ ಚಿಂತನೆಯಲ್ಲಿದ್ದರು. ಇಂಥ ವೇಳೆ ಬರ ಸಿಡಿಲಿನಂತೆ ನಡೆದ ಘಟನೆ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎನ್ನುತ್ತಾರೆ ರಾಹುಲ್ ಸಂಬಂಧಿ ಗುಜ್ಜು ರಾಠೋಡ.

ಬೀದಿಪಾಲಾದ ಬಡ ಕುಟುಂಬ:

ಬ್ಯಾಂಕ್ ದರೋಡೆ ಪ್ರಕರಣಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಕಳ್ಳರು ಸಿಕ್ಕಿಹಾಕಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಆದರೆ, ಇಂಥ ಘಟನೆಯಲ್ಲಿ ಜೀವ ಕಳೆದುಕೊಳ್ಳುವ ಅಮಾಯಕರ ಕುಟುಂಬ ಮಾತ್ರ ಬೀದಿ ಪಾಲಾಗುತ್ತಿರುವುದು ಮಾತ್ರ ವಿಪರ್ಯಾಸ. ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣಕ್ಕೆ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ ಮೃತ ರಾಹುಲ್ ತಂದೆ ಖೇರು ರಾಠೋಡ.

Last Updated : Aug 25, 2020, 10:19 PM IST

ABOUT THE AUTHOR

...view details