ವಿಜಯಪುರ/ಹಾವೇರಿ:ಸಿಂದಗಿ ಹಾಗೂ ಹಾನಗಲ್ ಮತಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರ ಇಂದು ಸಂಜೆ 7ಗಂಟೆಗೆ ಕೊನೆಗೊಳ್ಳಲಿದೆ. ಅವಧಿ ನಂತರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲು ಬಂದಿರುವ ಮತಕ್ಷೇತ್ರದ ಮತದಾರರರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗಿರುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಉಭಯ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯುತ್ತಿರುವ ಕಾರಣ ಅಕ್ಟೋಬರ್ 27ರ ಸಂಜೆ 7ರಿಂದ ಅಕ್ಟೋಬರ್ 30ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಗುಂಪು ಸೇರುವುದು, ಮೆರವಣಿಗೆ ಹಾಗೂ ಸಭೆ-ಸಮಾರಂಭ ನಿಷೇಧಿಸಲಾಗಿದೆ. ಉಭಯ ಕ್ಷೇತ್ರಗಳಲ್ಲಿ ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಹಾನಗಲ್ನಲ್ಲಿ 263 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.