ವಿಜಯಪುರ : ರಸ್ತೆ ಕಾಮಗಾರಿ ಪರಿಶೀಲಿಸುತ್ತಿದ್ದ ವೇಳೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮೇಲೆ ಕೆಲ ಕಿಡಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಸೊಲ್ಲಾಪುರ ರಸ್ತೆಯ ಬಳಮಕರ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಭಾನುವಾರ ಸಂಜೆ ಬಳಮಕರ ಕಲ್ಯಾಣ ಮಂಟಪದ ಬಳಿ ನಡೆಯುತ್ತಿದ್ದ ವಚನ ರಸ್ತೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಕೆಲ ಕಿಡಿಗೇಡಿಗಳ ಆಯುಕ್ತರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ಸಾವಕಾಶವಾಗಿ ವಾಹನ ಓಡಿಸಿ ಎಂದು ಬುದ್ದಿವಾದ ಹೇಳಿದ್ದಕ್ಕೆ ಸಮರ್ಥ ಶಿವಕುಮಾರ ಸಿಂದಗಿ ಸೇರಿ ನಾಲ್ವರು ರಸ್ತೆ ಬದಿ ನಿಂದೇನು ಕೆಲಸ ಎಂದು ಆವಾಜ್ ಹಾಕಿದ್ದಾರೆ. ಆಗ ಸ್ಥಳೀಯರು ಅವರು ಪಾಲಿಕೆ ಆಯುಕ್ತರು ಎಂದು ತಿಳಿಸಿದ್ದಾರೆ. ಆದರೂ ಅವರ ಮಾತು ಕೇಳದೇ ಆಯುಕ್ತರ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿ, ಮುಖಕ್ಕೆ ಬಲವಾಗಿ ಹೊಡೆದಿದ್ದಾರೆ.
ಪಾಲಿಕೆ ಆಯುಕ್ತರ ಮೇಲೆ ಹಲ್ಲೆ :ಪೊಲೀಸರು ಮಧ್ಯೆ ಪ್ರವೇಶಿಸಿ ಕಿಡಿಗೇಡಿಗಳನ್ನು ಬಿಡಿಸಲು ಹೋದರೂ ಸಹ ಹಲ್ಲೆ ನಡೆಸಿದ್ದಾರೆ. ತಾನೊಬ್ಬ ರಾಜಕೀಯ ಮುಖಂಡರ ಹಿಂಬಾಲಕರು, ಸುಮ್ಮನಾಗದಿದ್ದರೆ ನೋಡಿಕೊಳ್ಳುವೆ ಎಂದು ಧಮಕಿ ಹಾಕಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಸಮರ್ಥ ಸಿಂದಗಿ ಅವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.