ಮುದ್ದೇಬಿಹಾಳ(ವಿಜಯಪುರ): ಕೋವಿಡ್-19 ಎರಡನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ಅಪ್ಪಳಿಸಿದೆ. ಈ ಸಮಯದಲ್ಲಿ ಮುಂಚೂಣಿ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ತಾವು ಎದುರಿಸುವ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.
ನಾವು ಬದುಕಿದ್ದಾಗ ಕೊಡುವ ವೇತನ ಸರಿಯಾಗಿ ಕೊಟ್ಟರೆ ಸಾಕು. ಬರೀ ಬಾಯಿ ಮಾತಿಗೆ ಕೊರೊನಾ ವಾರಿಯರ್ಸ್ ಎಂದು ಹೇಳಿದರೆ ಸಾಕೇ? ನಾವು ಸತ್ತಾಗ ಕೊಡುವ 30 ಲಕ್ಷ ಪರಿಹಾರಧನ ಬೇಡ. ಅದರ ಉಪಯೋಗ ಯಾರಿಗೆ? ಇದ್ದಾಗ ಸರಿಯಾಗಿ ವೇತನ ಕೊಡಿ ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಶಾ ಕಾರ್ಯಕರ್ತೆ ರೇಣುಕಾ ಲಮಾಣಿ, ಊರಲ್ಲಿ ಯಾರೂ ನಮ್ಮನ್ನು ಬರಲು ಬಿಡುವುದಿಲ್ಲ. ನೀರು ಕೊಡುವುದಿಲ್ಲ. ನಮ್ಮನ್ನು ಹಳ್ಳಿಗಳಲ್ಲಿ ಅತೀ ಕೀಳುಮಟ್ಟದಿಂದ ಕಾಣುತ್ತಾರೆ. ಇದ್ದಾಗ ವೇತನ ಸರ್ಕಾರ ಕೊಡಬೇಕು ಎಂದು ಕೇಳಿಕೊಂಡರು.
ಇನ್ನೋರ್ವ ಕಾರ್ಯಕರ್ತೆ ಮಾತನಾಡಿ, ನಮಗೆ ಮರ್ಯಾದೆಯೇ ಇಲ್ಲವಾಗಿದೆ. ನಮ್ಮದು ಕೂಡ ಜೀವವೇ... ಅವರ ಆರೋಗ್ಯದ ಕಾಳಜಿಗೆ ಹೋದರೆ ಒರಟಾಗಿ ಮಾತನಾಡುತ್ತಾರೆ. ಎಲ್ಲೂ ಗುಂಪುಗೂಡಬೇಡಿ ಎಂದರೆ ಮಾತೇ ಕೇಳುವುದಿಲ್ಲ. ಈ ಕೆಲಸ ಯಾಕಾದರೂ ಮಾಡುತ್ತಿದ್ದೇವೆಯೋ ಎನ್ನಿಸಿಬಿಟ್ಟಿದೆ ಎಂದು ಹೇಳಿದರು.