ವಿಜಯಪುರ: ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 108 ಆ್ಯಂಬುಲೆನ್ಸ್ ಮಾದರಿಯಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಜಾರಿ ಮಾಡಲಾದ ಪಶು ಸಂಜೀವಿನಿ ವಾಹನಗಳು (ರೈತರ ಮನೆಯ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡುವ ಯೋಜನೆ) ವಿಜಯಪುರ ಜಿಲ್ಲೆಯಲ್ಲಿ ನಿರ್ವಹಣೆ ಇಲ್ಲದೇ ನಿಂತಲ್ಲೇ ನಿಂತಿವೆ.
ಜಾನುವಾರು ಪಾಲಕರ ಮನೆ ಬಾಗಿಲಿಗೆ ಹೋಗಿ ಅಗತ್ಯ ಚಿಕಿತ್ಸೆ ನೀಡುವ ವ್ಯವಸ್ಥೆಯ ಪಶು ಸಂಜೀವಿನಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅದರಂತೆ ಮತಕ್ಷೇತ್ರಕ್ಕೊಂದರಂತೆ ವಾಹನವನ್ನೂ ಸಹ ಒದಗಿಸಿದೆ. ನೂತನ ತಾಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ 13 ತಾಲೂಕುಗಳಿದ್ದು ಮತ್ತು ಬಸವನ ಬಾಗೇವಾಡಿ ತಾಲೂಕಿನಲ್ಲಿ ಹೆಚ್ಚು ಕುರಿಗಳಿರುವುದರಿಂದ ಒಂದು ಹೆಚ್ಚಿನ ವಾಹನ ಸೇರಿದಂತೆ ಒಟ್ಟು 14 ಪಶು ಸಂಜೀವಿನಿ ಆ್ಯಂಬುಲೆನ್ಸ್ ವಾಹನಗಳನ್ನು ಮಂಜೂರಿಸಲಾಗಿದೆ.
ಆದರೆ, ಅವುಗಳಿನ್ನೂ ರೈತರ ಮನೆ ಬಾಗಿಲಿಗೆ ಹೋಗದೆ ನಿಂತಲ್ಲೇ ನಿಂತಿವೆ. ವಿಜಯಪುರದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಚೇರಿ ಆವರಣದಲ್ಲಿ ಮಳೆ ಗಾಳಿ ಬಿಸಿಲಿನ ಜೊತೆಗೆ ಧೂಳು ತಿನ್ನುತ್ತಿವೆ. ಕಳೆದ ಒಂದೂವರೆ ತಿಂಗಳ ಹಿಂದೆಯೇ ಜಿಲ್ಲೆಗೆ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಬಂದಿದ್ದರೂ ಇನ್ನೂ ರೈತರ ಮನೆ ಬಾಗಿಲಿಗೆ ಹೋಗದಿರುವುದು ವಿಪರ್ಯಾಸ.