ಮುದ್ದೇಬಿಹಾಳ: ಬಿಡಾಡಿ ಜಾನುವಾರುಗಳಿಗೆ ನೆಲೆ ಕಲ್ಪಿಸಬೇಕು ಎಂದು ಆಲೋಚಿಸಿದ ತಾಲೂಕಿನ ರೈತರೊಬ್ಬರು ಖಾಸಗಿಯಾಗಿ ಗೋಶಾಲೆಯೊಂದನ್ನು ಆರಂಭಿಸಿ ಅವುಗಳಿಗೆ ಆಸರೆ ಕಲ್ಪಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
ಬಿಡಾಡಿ ಜಾನುವಾರುಗಳ ಉಪಟಳದಿಂದ ರಸ್ತೆಯಲ್ಲಿ ಸಂಚರಿಸುವರು ನಿತ್ಯ ಹಿಡಿಶಾಪ ಹಾಕುತ್ತಿದ್ದರು. ಕೆಲವರು ವಾಹನಗಳ ಮೇಲಿಂದ ಬಿದ್ದು ಗಾಯಗೊಂಡಿದ್ದರು. ಮತ್ತೆ ಕೆಲವರು ಬಿಡಾಡಿ ಜಾನುವಾರುಗಳಿಗೆ ಮುಕ್ತಿ ಕಾಣಿಸುವಂತೆ ಆಗ್ರಹಿಸುತ್ತಲೇ ಇದ್ದರು. ಹೀಗಿರುವಾಗ ಇಂತಹ ಬಿಡಾಡಿ ಜಾನುವಾರುಗಳಿಗೆ ಮೇವು ಹಾಕಿ ನೀರು ಕೊಟ್ಟು ಅವುಗಳು ನೆಮ್ಮದಿಯ ಬದುಕು ಸಾಗಿಸಲಿ ಎಂಬ ಉದ್ದೇಶದಿಂದ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದ ಪ್ರಗತಿಪರ ರೈತ ಬಾಪುಗೌಡ ಗೌಡರ ತಮ್ಮದೇ ಸ್ವಂತ ಜಮೀನಿನಲ್ಲಿ ಗೋಶಾಲೆ ಆರಂಭಿಸಿದ್ದಾರೆ.
ಬಿಡಾಡಿ ದನಗಳಿಂದ ಆಗುತ್ತಿದ್ದ ತೊಂದರೆ ಅಷ್ಟಿಷ್ಟಲ್ಲ. 3-4 ಬಾರಿ ಪುರಸಭೆಯವರು ಸಾರ್ವಜನಿಕ ತಿಳಿವಳಿಕೆ ನೋಟಿಸ್ ಕೊಟ್ಟು ಬಿಡಾಡಿ ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಅವುಗಳನ್ನು ಬೀದಿಗೆ ಬಿಡದಂತೆ ತಿಳಿವಳಿಕೆ ನೀಡಿದ್ದರು. ಆದರೆ ಅಂದಾಜು 50-60 ಜಾನುವಾರುಗಳು ಎಲ್ಲೆಂದರಲ್ಲಿ ತಿರುಗಾಡಿ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ, ತಂಗಡಗಿ ರಸ್ತೆಯಲ್ಲಿ ವಾಹನಗಳ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದ್ದವು. ಕೆಲವೊಮ್ಮೆ ರಸ್ತೆಗೆ ಅಡ್ಡಲಾಗಿ ನಿಂತರೆ ವಾಹನಗಳು ಹೋಗದೇ ಟ್ರಾಫಿಕ್ ಜಾಮ್ ಕೂಡಾ ಆಗುತ್ತಿತ್ತು. ಇದೆಲ್ಲವನ್ನೂ ಮನಗಂಡಿದ್ದ ಗೋನಾಳದ ಪ್ರಗತಿಪರ ರೈತ ಬಾಪುಗೌಡ ಗೌಡರ ಅವರು ಬಿಡಾಡಿಯಾಗಿ ತಿರುಗಾಡುವ ದನಗಳಿಗೆ ಆಶ್ರಯ ಕಲ್ಪಿಸಿದರೆ ಹೇಗೆ ಎಂದು ಆಲೋಚಿಸಿ ತಮ್ಮ ಸ್ವಂತ ಜಮೀನಿನಲ್ಲಿಯೇ ಸದ್ಯಕ್ಕೆ ಗೋಶಾಲೆಯನ್ನು ತೆರೆದಿದ್ದಾರೆ.
ಇದನ್ನು ಓದಿ:ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ಇನ್ನಿಲ್ಲ..