ವಿಜಯಪುರ: ಸಿಡಿ ಪ್ರಕರಣದ ಹಿಂದೆ ಬಹುದೊಡ್ಡ ಗ್ಯಾಂಗ್ ಇದೆ. ಇದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇವಲ ಒಬ್ಬ ಬಲಿಪಶುವಷ್ಟೇ. ಇದರ ಹಿಂದೆ ಸಾಕಷ್ಟು ಜನರಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿಡಿ ಗ್ಯಾಂಗ್ನಿಂದ ರಾಜಕಾರಣಿಗಳು ಭಯದಲ್ಲಿದ್ದಾರೆ. ನನ್ನ ಸಿಡಿ ಇದೆ, ಬೇರೆಯವರ ಸಿಡಿ ಇದೆ ಎಂದು ಹೆದರುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಾಜಕಾರಣಿಯೊಬ್ಬರು ಮಾಜಿ ಸಚಿವ, ಮಾಜಿ ಶಾಸಕರ ಸಿಡಿ ಇಟ್ಟುಕೊಂಡು ಆಟವಾಡಿಸಿದ್ದಾರೆ. ಮರ್ಯಾದೆ ತಗೆಯಬೇಡಿ ಎಂದು ಬೇಡಿಕೊಂಡರು ಸಹ ಸಿಡಿ ಬಿಡುಗಡೆ ಮಾಡಿ ಈಗ ಸಚಿವರಾಗಿದ್ದಾರೆ ಎನ್ನುವ ಮೂಲಕ ಹೆಸರು ತೆಗೆದುಕೊಳ್ಳದೇ ಹಾಲಿ ಸಚಿವರ ವಿರುದ್ಧ ಆರೋಪ ಮಾಡಿದರು.
ವಂಚಕ ಯುವರಾಜ್ ಬಳಿ ರಾಜಕಾರಣಿಯೊಬ್ಬರು ಕಾಲು ಮುಗಿದು ರಾಜ್ಯಸಭೆ ಟಿಕೆಟ್ಗಾಗಿ 10 ಕೋಟಿ ರೂ. ನೀಡಿರುವ ವಿಷಯ ವಿಧಾನಸಭೆಯ ಮೊಗಸಾಲೆಯಲ್ಲಿ ಹರಿದಾಡುತ್ತಿದೆ. ಇನ್ನೂ ಹಲವರ ಸಿಡಿ ಇದೆ ಎನ್ನುವ ಸುದ್ದಿ ಸಹ ಹರಿದಾಡುತ್ತಿದೆ. ಈ ರೀತಿ ರಾಜಕಾರಣಿಗಳನ್ನು ಹೆದರಿಸುತ್ತಿದ್ದಾರೆ. ಹೀಗಾಗಿ ರಾಜಕಾರಣಿಗಳು ಸಿಡಿ ಎಂದರೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.