ವಿಜಯಪುರ: ಇತ್ತೀಚೆಗೆ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳು ಸೇರಿ 9 ಜನರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.
ವಿಜಯಪುರದಲ್ಲಿ ಇಬ್ಬರು ಆರೋಪಿಗಳಿಗೆ ಕೊರೊನಾ
ಮೂವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ಇಬ್ಬರು ಬಾಲಕಿಯರಲ್ಲಿ ಸೊಂಕು ಪತ್ತೆಯಾಗಿದೆ. ಬಂಗಾರ ಸಿಕ್ಕಿದೆ ಎಂದು ನಂಬಿಸಿ ಹೊರ ರಾಜ್ಯದ ದಂಪತಿಯನ್ನು ಆಲಮೇಲಕ್ಕೆ ಕರೆಯಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿದ್ದ ದರೋಡೆಕೋರರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರ ವರದಿ ಪಾಸಿಟಿವ್ ಬಂದಿದ್ದು, ಆತಂಕ ಮೂಡಿಸಿದೆ.
ನ್ಯಾಯಾಧೀಶರಿಗೂ ಕ್ವಾರಂಟೈನ್: ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಈ ಆರೋಪಿಗಳನ್ನು ಸಿಂದಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಿಂದಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನ್ಯಾಯಾಲಯದ ಕಾರ್ಯ ಕಲಾಪ ಸ್ಥಗಿತಗೊಳಿಸದೆ ಸಂಬಂಧಪಟ್ಟ ನ್ಯಾಯಾಲಯದ ನ್ಯಾಯಿಕ ಅಧಿಕಾರಿಗಳು ಕೂಡ 14 ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಪಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ವರದಿ ಒದಗಿಸುವಂತೆ ಸಿಂದಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಿಗೆ ಹೋಮ್ ಕ್ವಾರಂಟೈನ್ನಲ್ಲಿ ಇರಲು ಮನವಿ ಮಾಡಲಾಗಿದೆ. ಇವರ ಜೊತೆ ಆರೋಪಿಗಳ ಜೊತೆ ಇದ್ದ ಇಬ್ಬರು ಪಿಎಸ್ಐ ಹಾಗೂ 37 ಪೊಲೀಸ್ ಸಿಬ್ಬಂದಿಯ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಅಲ್ಲದೇ ಇಬ್ಬರು ಪಿಎಸ್ಐ ಮತ್ತು 14 ಜನ ಪೊಲೀಸರನ್ನು ಕ್ವಾರಂಟೈನ್ ಆಗಲು ಸೂಚನೆ ನೀಡಲಾಗಿದೆ.