ಕಾರವಾರ:ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮದ್ಯದ ಅಕ್ರಮ ದಾಸ್ತಾನು, ಸರಬರಾಜು ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ. ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮುಕ್ತ ಹಾಗೂ ನ್ಯಾಯಸಮ್ಮತ ಉಪ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಅವಕಾಶ ನೀಡದಂತೆ ನಿಯೋಜಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದರು.
ಉತ್ತರ ಕನ್ನಡ ಗಡಿ ಜಿಲ್ಲೆಯಾಗಿರುವುದರಿಂದ ಅಕ್ರಮ ಮದ್ಯದ ಸಾಗಾಟ ಅಥವಾ ದಾಸ್ತಾನುಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಉಪ ಚುನಾವಣೆ ನಡೆಯುವ ಕ್ಷೇತ್ರವಲ್ಲದೆ ಬೇರೆ ತಾಲೂಕುಗಳಲ್ಲಿಯೂ ಅಕ್ರಮಗಳು ನಡೆಯದಂತೆ ಕ್ರಮ ವಹಿಸಬೇಕಿದೆ ಎಂದರು. ಇಲಾಖೆಯಿಂದ ತಂಡಗಳನ್ನು ರಚಿಸಿ ಅಕ್ರಮಗಳನ್ನು ತಡೆಗಟ್ಟಬೇಕು. ಅಲ್ಲದೆ, ಮತದಾನದ ದಿನ ಮತ್ತು ಮತ ಎಣಿಕೆ ದಿನ ಹೊರಡಿಸುವ ನಿಷೇಧಾಜ್ಞೆ ಆದೇಶವನ್ನು ಕಟ್ಟನಿಟ್ಟಾಗಿ ಜಾರಿ ತರುವಂತೆ ಸೂಚಿಸಿದರು.
ಅಕ್ರಮ ಮದ್ಯ ತಡೆಗೆ ಡಿಸಿ ಖಡಕ್ ಸೂಚನೆ ಅಬಕಾರಿ ಉಪಯುಕ್ತ ಮೇರುನಂದನ್ ಮಾತನಾಡಿ, ಉಪ ಚುನಾವಣೆ ನಿಮಿತ್ತ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಅಬಕಾರಿ ಅಕ್ರಮಗಳನ್ನು ತಡೆಯಲು ಕ್ರಮ ವಹಿಸಲಾಗಿದೆ. ಜಿಲ್ಲಾ ಕಂಟ್ರೋಲ್ ರೂಂ ಸೇರಿದಂತೆ ಯಲ್ಲಾಪುರ ವಲಯದಲ್ಲಿ ನಾಲ್ಕು ಕಂಟ್ರೋಲ್ ರೂಂಗಳನ್ನು ರಚಿಸಲಾಗಿದೆ. ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಮುಕ್ತ ಹಾಗೂ ನಿಷ್ಪಕ್ಷವಾದ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ, ಶಿರಸಿ ತಾಲೂಕುಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು.
ಸಾರ್ವಜನಿಕರು ಅಕ್ರಮ ಮದ್ಯದ ಮಾಹಿತಿ ಇದ್ದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08382-227094, ತಾಲೂಕು ಕಂಟ್ರೋಲ್ ರೂಂ ಯಲ್ಲಾಪುರ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08419-261510, ತಹಸೀಲ್ದಾರ್ ಕಚೇರಿ ಮುಂಡಗೋಡ 08301-222122, ಅಬಕಾರಿ ನಿರೀಕ್ಷಕರ ಕಚೇರಿ ಸಿರಸಿ ವಲಯ 08384-224168 ಆಗಿರುತ್ತದೆ. ಈ ಕಂಟ್ರೋಲ್ ರೂಂಗಳ ಉಸ್ತುವಾರಿ ನೋಡಿಕೊಳ್ಳಲು ಯಲ್ಲಾಪುರ ಉಪ ವಿಭಾಗ ಅಬಕಾರಿ ಉಪ ನಿರೀಕ್ಷಕ ಆರ್.ವಿ. ತಳೇಕರ್ 9449597124, 9538721125 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.