ಶಿರಸಿ:ರಾಜ್ಯ ರಾಜಕಾರಣದ ಈ ದಿಢೀರ್ ಬೆಳವಣಿಗೆ ಬಗ್ಗೆ ಹೇಳೋದು ಸಾಕಷ್ಟಿದೆ. ಇಲ್ಲಿ ಯಾರು ಸತ್ಯ ಹರಿಶ್ಚಂದ್ರರು ಎಂದು ತಿಳಿಸುತ್ತೇವೆ. ಸುಪ್ರಿಂ ಕೋರ್ಟ್ ತೀರ್ಪಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಹೇಳುತ್ತೇವೆ ಎಂದು ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿ ಯಾರು ಸತ್ಯ ಹರಿಶ್ಚಂದ್ರ ಎಂದು ತಿಳಿಸ್ತೆವೆ:ಮಾಜಿ ಶಾಸಕ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15-20 ಶಾಸಕರು ಏಕಾಏಕಿ ಪಕ್ಷ ತೊರೆಯುತ್ತಾರೆಂದರೆ ಯಾಕೆ? ಈಗ ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ತಪ್ಪಿನಿಂದ ಇಷ್ಟು ದೊಡ್ಡ ಬೆಳವಣಿಗೆ ನಡೆಯಿತು ಎಂದು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾವಿರಾರು ಕೋಟಿ ರೂಪಾಯಿ ಒಡೆಯರು ಕೂಡ ಸಚಿವ ಸ್ಥಾನ ತ್ಯಜಿಸಿದ್ದಾರೆ. ಯಾರ್ಯಾರೋ ಅಧಿಕಾರ ತ್ಯಾಗ ಮಾಡುವುದಾಗಿ 30 ವರ್ಷಗಳಿಂದ ಹಾಗೆಯೇ ಮುಂದುವರಿಯುತ್ತಿದ್ದಾರೆ. ಅವರೆಲ್ಲರ ಬಗ್ಗೆಯೂ ತಿಳಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾರೆ.
ನಾನು ಹಣ ಪಡೆದಿಲ್ಲ. ನನಗೂ ದೇವರ ಮೇಲೆ ವಿಶ್ವಾಸ ಇದೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಲು ಸಿದ್ಧ. ನಾವು ಕೋಟಿಗಳನ್ನು ಬಹಳ ಹಿಂದೆಯೇ ನೋಡಿದ್ದೇವೆ. ಹೊಸದಾಗಿ ನೋಡುವ ಅನಿವಾರ್ಯತೆ ಇಲ್ಲ ಎಂದು ಹಣ ಪಡೆದ ಆರೋಪದ ಕುರಿತು ಉತ್ತರಿಸಿದರು.