ಕಾರವಾರ (ಉತ್ತರ ಕನ್ನಡ) : ಮಣಿಪುರದಲ್ಲಿ ಬುಡಕಟ್ಟು ಕುಕಿ ಸಮಾಜದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕಾರವಾರದಲ್ಲಿ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕಾರವಾರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಮೆರವಣಿಗೆ ಸುಭಾಷ್ ಸರ್ಕಲ್, ಸವಿತಾ ಸರ್ಕಲ್ ಮೂಲಕ ಕಾಜುಬಾಗ- ಕೋಡಿಬಾಗ ರಸ್ತೆಯಲ್ಲಿ ಸಾಗಿ ಪಿಕಳೆ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾಕಾರರು ಜಮಾವಣೆಗೊಂಡರು. ಸಾವಿರಕ್ಕೂ ಅಧಿಕ ಮಂದಿ ಸೇರಿದ್ದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಧರ್ಮಭೇದವಿಲ್ಲದೆ ಅನೇಕ ಸಾಮಾಜಿಕ ಕಾರ್ಯಕರ್ತರೂ ಸೇರಿದ್ದರು.
ಮಣಿಪುರದಲ್ಲಿ ಶಾಂತಿ ಸ್ಥಾಪಿಸಿ, ಮಣಿಪುರಕ್ಕಾಗಿ ಪ್ರಾರ್ಥಿಸಿ, ಮೌನ ಬೇಡ- ಶಾಂತಿ ಬೇಕು, ಹೆಣ್ಣಿಗೆ ಗೌರವ - ಭಾರತ ಮಾತೆಗೆ ಗೌರವ ಎಂಬಿತ್ಯಾದಿ ಫಲಕಗಳನ್ನ ಹಿಡಿದು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಕ್ರೈಸ್ತರ ವಿವಿಧ ಚರ್ಚ್ಗಳ ಧರ್ಮಗುರುಗಳು, ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕ್ರೈಸ್ತ ಸಂಸ್ಥೆಗಳನ್ನೇ ಗುರಿಯಾಗಿಸಿ ಇಂಥ ಘಟನೆಗಳು ನಡೆಯುತ್ತಿವೆ: ಇನ್ನು, ಪ್ರತಿಭಟನಾ ಮೆರವಣಿಗೆಯ ಆರಂಭದಲ್ಲಿ ಮಾತನಾಡಿದ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬೆಳಗಾವಿ ಹಾಗೂ ಉತ್ತರಕನ್ನಡದ ಮುಖ್ಯಸ್ಥ ಡೆರಿಕ್ ಫರ್ನಾಂಡೀಸ್, ಇದು ಬುಡಕಟ್ಟು ಜನಾಂಗಗಳ ನಡುವಿನ ಜನಾಂಗೀಯ ಗಲಭೆಯಲ್ಲ. ಇದರ ಹಿಂದೆ ಬೇರೆ ಏನೋ ಇದೆ. ಕೇವಲ ಕ್ರೈಸ್ತರನ್ನ, ಕ್ರೈಸ್ತ ಸಂಸ್ಥೆಗಳನ್ನೇ ಗುರಿಯಾಗಿಸಿ ಇಂಥ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.