ಕಾರವಾರ:ಕಡಲಾಮೆಗಳು ಕಡಲ ಪರಿಸರದ ಸಮತೋಲನ ಕಾಯುವ ಜೀವಿಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಸಂತತಿ ಅವನತಿ ಹಂತವನ್ನು ತಲುಪುತ್ತಿದೆ. ಕರಾವಳಿ ಭಾಗದಲ್ಲಿ ಅರಣ್ಯ ಇಲಾಖೆ ಆಮೆಗಳ ಸಂರಕ್ಷಣೆಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಅದರಂತೆ ಕಡಲಾಮೆಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕರಾವಳಿ ನಗರಿ ಕಾರವಾರದಲ್ಲಿ ವಿನೂತನವಾಗಿ 'ಆಮೆ ಉತ್ಸವ' ನಡೆಸಲಾಯಿತು.
ಕಡಲ ನಗರಿ ಕಾರವಾರದಲ್ಲಿ ಕಡಲಾಮೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ವನಸಿರಿ ಭವನದ ಆವರಣದಲ್ಲಿ ಇದೇ ಮೊದಲ ಬಾರಿಗೆ 'ಕಡಲಾಮೆ ಉತ್ಸವ'ವನ್ನು ಆಯೋಜಿಸಲಾಗಿತ್ತು. ಕೆನರಾ ಅರಣ್ಯ ವೃತ್ತ ಹಾಗೂ ಕಾರವಾರ ಅರಣ್ಯ ವಿಭಾಗದಿಂದ ಆಯೋಜಿಸಲಾಗಿದ್ದ ಉತ್ಸವದಲ್ಲಿ ಸಮುದ್ರದ ಜೀವವೈವಿಧ್ಯ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಲಾಮೆಗಳ ಪಾತ್ರ, ಅವುಗಳ ಸಂರಕ್ಷಣೆ ಕುರಿತು ತಿಳಿಸಲಾಯಿತು.
ದೇಶದಲ್ಲಿ ಕಾಣಸಿಗುವ 5 ಪ್ರಭೇದದ ಆಮೆಗಳ ಪೈಕಿ ರಾಜ್ಯದ ಕರಾವಳಿಯಲ್ಲಿ ಕಾಣಸಿಗುವ ಆಲಿವ್ ರಿಡ್ಲೆ ಪ್ರಭೇದದ ಕಡಲಾಮೆಗಳು ಅವನತಿಯ ಅಂಚಿನಲ್ಲಿವೆ. ಈ ಕಾರಣದಿಂದ ಅವುಗಳ ಸಂರಕ್ಷಣೆ ಹಾಗೂ ಸಂತತಿ ಅಭಿವೃದ್ಧಿ ಮಹತ್ವದ್ದಾಗಿದೆ. ಇದಕ್ಕೆ ಪೂರಕವಾಗಿ ಮೀನುಗಾರರು, ಸಾರ್ವಜನಿಕರು ಕಡಲಾಮೆಗಳ ಸಂರಕ್ಷಣೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎನ್ನುವುದನ್ನು ಉತ್ಸವದ ಮೂಲಕ ಜಾಗೃತಿ ಮೂಡಿಸಲಾಯಿತು.
ಆಮೆ ಸಂರಕ್ಷಣೆಗೆ ಸಂಕಲ್ಪ: ಈ ಕುರಿತು ಮಾಹಿತಿ ನೀಡಿದ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ "ಪಶ್ಚಿಮ ಕರಾವಳಿಯಲ್ಲಿ ಅರಣ್ಯ ಇಲಾಖೆ ಆಮೆಗಳ ಸಂರಕ್ಷಣೆ ಮಾಡುತ್ತಿದೆ. ಹೊನ್ನಾವರದಲ್ಲಿ 1984 ರಿಂದ ಹಾಗೂ ಕಾರವಾರದಲ್ಲಿ ಕಳೆದ ಎರಡು ವರ್ಷದಿಂದ ನಿರಂತರವಾಗಿ ಆಮೆ ಮೊಟ್ಟೆಗಳ ಸಂರಕ್ಷಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮೀನುಗಾರರಿಗೆ ಈ ಬಗ್ಗೆ ಮಾಹಿತಿ ನೀಡಿ ಮೊಟ್ಟೆಗಳು ಕಂಡುಬಂದಲ್ಲಿ ಅವುಗಳ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ ಕಡಲ ತೀರವನ್ನು ಸ್ವಚ್ಚಗೊಳಿಸಿಟ್ಟುಕೊಳ್ಳುವ ಬಗ್ಗೆ ತಿಳಿಸಲಾಗಿದೆ" ಎಂದರು