ಕಾರವಾರ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ಟಫ್ ರೂಲ್ಸ್ಗಳನ್ನ ಜಾರಿ ಮಾಡಲಾಗಿದೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಲ್ಲದೆ ಬಿಕೋ ಎನ್ನುತ್ತಿದ್ದು, ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದ ವ್ಯಾಪಾರಸ್ಥರು, ಟ್ಯಾಕ್ಸಿ ಚಾಲಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬಿಕೋ ಎನ್ನುತ್ತಿರುವ ಉತ್ತರಕನ್ನಡದ ಪ್ರವಾಸಿ ತಾಣಗಳು ಹೌದು, ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಮುರ್ಡೇಶ್ವರ, ಗೋಕರ್ಣಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ಅಟ್ಟಹಾಸ ರಾಜ್ಯದಲ್ಲಿ ಮುಂದುವರಿದಿದ್ದು, ಇದರ ನೇರ ಪರಿಣಾಮ ಪ್ರವಾಸೋದ್ಯಮಕ್ಕೂ ತಟ್ಟಿದೆ.
ವಿದೇಶಿಗರ ಪಾಲಿಗೆ ಸ್ವರ್ಗದಂತಿರುವ ಗೋಕರ್ಣ ಹಾಗೂ ಮುರುಡೇಶ್ವರದಲ್ಲಿ ಪ್ರವಾಸಿಗರಿಲ್ಲದೆ ಕಡಲ ತೀರಗಳು ಬಿಕೋ ಎನ್ನುತ್ತಿವೆ. ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ದೇಶ ವಿದೇಶಿ ಪ್ರವಾಸಿಗರ ಜೊತೆಗೆ ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಮತ್ತೆ ಕೊರೊನಾ ಭೀತಿ ಎದುರಾದ ಕಾರಣ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರೇ ಇಲ್ಲದಂತಾಗಿದೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಾಗೂ ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಇದರಿಂದ ಜೀವನಾವಶ್ಯಕ ವಸ್ತುಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಆದರೆ ಕರಾವಳಿ ಭಾಗದ ಕಡಲತೀರಗಳಲ್ಲಿ ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದ ಸಣ್ಣಪುಟ್ಟ ವ್ಯಾಪಾರಸ್ಥರು, ಟ್ಯಾಕ್ಸಿ ಆಟೋ ಚಾಲಕರು, ಫೋಟೋಗ್ರಾಫರ್ಸ್ ಹಾಗೂ ಜಲಸಾಹಸಿ ಕ್ರೀಡೆ ನಡೆಸುತ್ತಿದ್ದವರು ಇದೀಗ ಕಂಗಾಲಾಗಿದ್ದಾರೆ.
ಒಟ್ಟಾರೆ ಕಳೆದ ಬಾರಿ ಕೊರೊನಾದಿಂದಾಗಿ ಸಂಪೂರ್ಣ ಸ್ತಬ್ಧಗೊಂಡಿದ್ದ ಪ್ರವಾಸಿ ತಾಣಗಳಲ್ಲಿ ಮತ್ತೆ ಅದೇ ಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ಮೊದಲೇ ಸಂಕಷ್ಟದ ಬಾಣೆಲೆಯಲ್ಲಿ ಬೇಯುತ್ತಿರುವ ವ್ಯಾಪಾರಸ್ಥರಿಗೆ ಇದೀಗ ಕೊರೊನಾ ಟಫ್ ರೂಲ್ಸ್ ಸಣ್ಣಪುಟ್ಟ ವ್ಯಾಪಾರಸ್ಥರು, ಟ್ಯಾಕ್ಸಿ ಚಾಲಕರಿಗೆ ನುಂಗಲಾಗದ ತುತ್ತಾಗಿದೆ.