ಕಾರವಾರ: ಜಿಲ್ಲೆಯ ಕುಮಟಾ ತಾಲೂಕಿನ ಖಂಡಗಾರ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಬೆಳೆದು ನಿಂತ ಮರಗಳನ್ನ ಕಡಿದು ಹಾಕಿ ಜಾಗ ಕಬಳಿಸಲು ಭೂಗಳ್ಳರು ಮುಂದಾಗಿದ್ದು, ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಖಂಡಗಾರ ಗ್ರಾಮದ ಸಮೀಪ ಕಂದಾಯ ಇಲಾಖೆಗೆ ಸಂಬಂಧಿಸಿದ ಸುಮಾರು 50 ಎಕರೆಗೂ ಅಧಿಕ ಭೂಮಿ ಇದೆ. ಇಲ್ಲಿ ಬೃಹತ್ ಮರಗಳು ಬೆಳೆದು ನಿಂತಿದ್ದು, ಕಂದಾಯ ಭೂಮಿಯನ್ನು ಕಬಳಿಸುವುದಕ್ಕೆ ಭೂಗಳ್ಳರು ಸ್ಕೆಚ್ ಹಾಕಿದ್ದಾರೆ. ಈಗಾಗಲೇ ಬೆಳೆದು ನಿಂತ ಮರಗಳನ್ನು ಕಡಿದು ಬೇಲಿ ಹಾಕಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಭೂಗಳ್ಳರ ಕೃತ್ಯಕ್ಕೆ ಕಿಡಿಕಾರಿದ್ದಾರೆ.
ಮರಗಳನ್ನು ಕಡಿದು ಹಾಕಿದ ಭೂಗಳ್ಳರು ಇನ್ನು ಕೆಲ ದಿನಗಳ ಹಿಂದೆ ಇದೇ ಜಾಗದಲ್ಲಿ ಸುಮಾರು ಒಂದು ಎಕರೆ ಇಪ್ಪತ್ತು ಗುಂಟೆ ಜಾಗವನ್ನ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ನೌಕರನೋರ್ವ ಇದು ನನ್ನ ಜಾಗ ಎಂದು ಮಂಜೂರು ಮಾಡಿಕೊಂಡು ಬಂದಿದ್ದನಂತೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಹಿಂದಿನಿಂದ ನೆಲೆಸಿದ್ದರೆ ಆ ಜಾಗವನ್ನ ಸ್ವಂತಕ್ಕೆ ಮಾಡಿಕೊಡಬಹುದು ಎನ್ನುವ ಆದೇಶ ಹೊರಬಿದ್ದ ಹಿನ್ನೆಲೆ ಇದನ್ನೇ ಲಾಭ ಮಾಡಿಕೊಂಡ ಭೂಗಳ್ಳರು ನೂರಾರು ಗಿಡ, ಮರಗಳನ್ನು ಕಡಿದು ಬೇಲಿ ಹಾಕಿ ಜಾಗವನ್ನ ಲೂಟಿ ಮಾಡೋದಕ್ಕೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಬೀಟೆ, ತೇಗ, ಸಾಗುವಾನಿಯಂತಹ ಮರಗಳನ್ನು ಭೂಗಳ್ಳರು ಕಡಿದಿದ್ದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ತುಟಿ ಬಿಚ್ಚಿಲ್ಲ. ಈ ಹಗರಣದ ಹಿಂದೆ ಹಲವರ ಕೈವಾಡವಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.