ಕಾರವಾರ: ಶಾಲಾ ಕಾಲೇಜಿಗೆ ಹಿಜಾಬ್ ಅಥವಾ ಇನ್ಯಾವುದೇ ವಸ್ತು ಹಾಕಿಕೊಂಡು ಪರೀಕ್ಷೆಗೆ ಬರುವ ಯಾವುದೇ ವಿದ್ಯಾರ್ಥಿಗೆ ಅವಕಾಶ ಇಲ್ಲ. ಹೈಕೋರ್ಟ್ ಏನು ತೀರ್ಪು ನೀಡುತ್ತದೆಯೋ ಅದನ್ನೇ ನಾವು ಪಾಲಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ ಹೇಳಿದ್ದಾರೆ.
ಪರೀಕ್ಷೆಗೆ ಗೈರಾದವರಿಗೆ ಮತ್ತೊಮ್ಮೆ ಅವಕಾಶ ಇಲ್ಲ: ಸಚಿವ ಬಿ.ಸಿ ನಾಗೇಶ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 86 ಸಾವಿರ ವಿದ್ಯಾರ್ಥಿಗಳಲ್ಲಿ 400 ರಿಂದ 500 ವಿದ್ಯಾರ್ಥಿಗಳು ಹಿಜಾಬ್ನಂತಹ ವಿಚಾರಗಳಲ್ಲಿ ತೊಡಗಿದ್ದಾರೆ. ಬಾಕಿ ವಿದ್ಯಾರ್ಥಿಗಳು ಶಿಕ್ಷಣ ಕಲಿಯಲು ಬರುತ್ತಿದ್ದಾರೆ. ಅಂತಹವರಿಗೆ ಆದ್ಯತೆ ನೀಡುತ್ತೇವೆ ಎಂದರು.
ಪರೀಕ್ಷೆಗೆ ಬರುವಾಗಲು ನ್ಯಾಯಾಲಯದ ತೀರ್ಪನ್ನು ಪಾಲಿಸುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ರಜೆ ಮಾಡಿದವರಿಗೆ ಮತ್ತೆ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಮುಂದಿನ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಜಾರಿ:ಮುಂದಿನ ಶೈಕ್ಷಣಿಕ ವರ್ಷಕ್ಕೆ 20 ಸಾವಿರ ಶಾಲೆಗಳಲ್ಲಿ ಮಕ್ಕಳ ಆರಂಭಿಕ ಶಿಕ್ಷಣ ಅರ್ಲಿ ಚೈಲ್ಡ್ ಎಜುಕೇಶನ್ ಪರಿಚಯಿಸುತ್ತಿದ್ದೇವೆ. ಒಂದು, ಎರಡು ಮತ್ತು ಮೂರನೇ ತರಗತಿಗೆ ಅಗತ್ಯವಾದ ಮಗುವಿನ ಅಭ್ಯಾಸವನ್ನ ಅಂಗನವಾಡಿಯಲ್ಲೇ ಕೊಡುವ ಕಾರ್ಯ ಮಾಡಲಾಗುವುದು.
2013ರಲ್ಲಿ ಪಠ್ಯ-ಪುಸ್ತಕದಲ್ಲಿ ತಂದಂತ ಪರಿಷ್ಕರಣೆಯನ್ನ ಮತ್ತೆ ಸರಿಪಡಿಸುವ ಕಾರ್ಯ ಮಾಡಲಾಗುವುದು. ಮುಂದಿನ ವರ್ಷ ಸರಿಯಾಗಿಯೇ ಪಠ್ಯಗಳು ಬರಲಿವೆ. ಇತಿಹಾಸದಲ್ಲಿ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂಬ ಬಗ್ಗೆ ಗಮನ ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ವಾರದಲ್ಲಿ ಶಿಕ್ಷಕರ ನೇಮಕಾತಿ ನೋಟಿಫಿಕೇಷನ್:ಇನ್ನೊಂದು ವಾರದಲ್ಲಿ ಶಿಕ್ಷಕರ ನೇಮಕಾತಿ ನೋಟಿಫಿಕೇಷನ್ ಹೊರಡಿಸುತ್ತೇವೆ. 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಇದರಲ್ಲಿ 5 ಸಾವಿರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ನೀಡುತಿದ್ದೇವೆ ಎಂದು ಮಾಹಿತಿ ನೀಡಿದರು.
ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ:ಪಂಚರಾಜ್ಯ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರು ಈಗ ಪಾಠ ಕಲಿಯುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಸಳ್ಳುಗಳಿಂದ ಜನರನ್ನು ನಂಬಿಸಲು ಆಗುವುದಿಲ್ಲ ಎಂಬುದನ್ನು ಕಾಂಗ್ರೆಸ್ಗೆ ಮತ್ತೆ ಮನವರಿಕೆ ಮಾಡಿದ್ದಾರೆ. ಪ್ರಾಮಾಣಿಕವಾಗಿ ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ಜನ ಗುರುತಿಸುತ್ತಾರೆ ಎಂದರು.
ಇದನ್ನೂ ಓದಿ:ಟೆಸ್ಟ್ ಪಂದ್ಯ ವೀಕ್ಷಣೆಗೆ ತೆರಳಿದ ಕಿಚ್ಚ ಸುದೀಪ್.. ಅಪ್ಪು ಫೋಟೋ ಜೊತೆ ಬಾದ್ಶಾ ಪೋಸ್