ಕಾರವಾರ :ತಿಂಗಳ ಹಿಂದೆ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಟೆಲ್‌ವೊಂದರ ಬಳಿ ಇಟ್ಟಿದ್ದ ಬುಲೆಟ್ ಬೈಕ್ನೊಂದಿಗೆ ಪರಾರಿಯಾಗಿದ್ದ ಕಳ್ಳನನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಂಡಾದ ಸೈಯ್ಯದ್ ಇಸ್ರಾರ್ ಬಂಧಿತ ಆರೋಪಿ. ಈತ ಕಳೆದ ಕೆಲ ತಿಂಗಳ ಹಿಂದೆ ಮುಂಡಗೋಡಿನಲ್ಲಿ ಅರಣ್ಯಗಳ್ಳತನ ಆರೋಪದಡಿ ಬಂಧನಕ್ಕೊಳಗಾಗಿದ್ದ. ಆದರೆ, ಆತನಿಗೆ ಕೋವಿಡ್ ಕಾಣಿಸಿದ್ದರ ಹಿನ್ನೆಲೆ ಕಾರವಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವೇಳೆ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಆರೋಪಿ ನಗರದ ಡ್ರೈವ್ ಇನ್ ಹೋಟೆಲ್ ಹಿಂಭಾಗ ಇಟ್ಟಿದ್ದ ಅನೀಶ್ ಉಳ್ವೇಕರ್ ಎಂಬುವರ ಬುಲೆಟ್ ಬೈಕ್ ಕದ್ದು ಅದರೊಂದಿಗೆ ಪರಾರಿಯಾಗಿದ್ದ.
ಪ್ರಕರಣವನ್ನು ದಾಖಲಿಸಿಕೊಂಡು ಹುಡುಕಾಟ ನಡೆಸಿದ ಪೊಲೀಸರು ಬಣ್ಣ ಬದಲಿಸಿಕೊಂಡು ಓಡಾಡುತ್ತಿದ್ದ ಬುಲೆಟ್ ದಾಖಲಾತಿ ಪರಿಶೀಲಿಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ. ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಂತೆ ಸಿಪಿಐ ಸಂತೋಷ ಶೆಟ್ಟಿ, ಪಿಎಸ್‌ಐ ಸಂತೋಷ ಕುಮಾರ್ ಹಾಗೂ ಸಿಬ್ಬಂದಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.