ಭಟ್ಕಳ:ಇಲ್ಲಿನ ಮಾರುಕೇರಿಯ ಕಿತ್ರೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ತಾಲೂಕು ಆಡಳಿತವೇ ನೆರವೇರಿಸಿತು.
ಬೆಳಗಿನ ಜಾವ ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿತ್ರೆಯಲ್ಲಿ ಕೋವಿಡ್ ಸೋಂಕಿತರೊಬ್ಬರು (60) ಮನೆಯಲ್ಲೇ ತೀವ್ರತರದ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದರು. ಇವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರ ಸಂಜೆಯಷ್ಟೇ ಮನೆಗೆ ಬಂದಿದ್ದರು. ಇವರ ಅಂತ್ಯ ಸಂಸ್ಕಾರ ನಡೆಸಲು ಕೋವಿಡ್ ಭಯದಿಂದ ಯಾರೂ ಮುಂದೆ ಬಂದಿರಲಿಲ್ಲ.
ಮಕ್ಕಳು ಚಿಕ್ಕವರಿರುವ ಕಾರಣ ಮನೆಯವರು ಶವ ಸಂಸ್ಕಾರಕ್ಕಾಗಿ ತಾಲೂಕು ಆಡಳಿತದ ಸಹಾಯ ಯಾಚಿಸಿದ್ದರು. ಸ್ಥಳಕ್ಕೆ ತಹಸೀಲ್ದಾರ್ ರವಿಚಂದ್ರ, ಸಿಪಿಐ ದಿವಾಕರ್, ಜಾಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅಜಯ ಭಂಡಾರಕರ್, ಪಿಡಿಒ ಮಹೇಶ ನಾಯ್ಕ, ವೈದ್ಯರು ಮತ್ತಿತರ ಅಧಿಕಾರಿಗಳ ತಂಡ ಭೇಟಿ ನೀಡಿ ಮೃತನ ಅಂತ್ಯಸಂಸ್ಕಾರಕ್ಕೆ ಬೇಕಾಗುವ ಎಲ್ಲಾ ಏರ್ಪಾಟು ಮಾಡಿದರು.
ಕೋವಿಡ್ ಸೋಂಕಿತನ ಶವ ಸಂಸ್ಕಾರ ನೆರವೇರಿಸಿದ ತಾಲೂಕಾಡಳಿತ ಮಧ್ಯಾಹ್ನ ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಮೃತನ ಪುತ್ರನ ಜೊತೆಗೆ ಪಿಪಿಇ ಕಿಟ್ ಧರಿಸಿದ ಪೌರಕಾರ್ಮಿಕರು ಮೃತದೇಹವನ್ನು ಹೊತ್ತೊಯ್ದು ಅಂತ್ಯಸಂಸ್ಕಾರಕ್ಕೆ ನೆರವಾದರು. ತಾಲೂಕು ಆಡಳಿತದ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.
ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಅವರು ಮಾತನಾಡಿ, ಹಿಂದೂಗಳ ಸಂಪ್ರದಾಯದಂತೆ ನಮಗೆ ಶವಸಂಸ್ಕಾರ ಮಾಡುವುದು ಕಷ್ಟವಾಗುತ್ತದೆ. ಚಟ್ಟ ಕಟ್ಟುವುದು. ಮಡಿಕೆ ಓಡೆಯುವುದು ಇನ್ನಿತರ ಸಂಪ್ರದಾಯ ಪಾಲಿಸಿವುದು ನಮಗೆ ಬರದಿದ್ದರೂ ತಿಳಿದ ಮಟ್ಟಿಗೆ ಮಾಡಿ ಮುಗಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಇಂತಹ ಕೆಲಸಗಳನ್ನು ಮಾಡಿದರೆ ಉತ್ತಮ ಎಂದರು.