ಶಿರಸಿ:ಕೊಲೆಗೆ ಯತ್ನ, ದೊಂಬಿ, ಕಳ್ಳತನ ಹೀಗೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಿರಸಿಯ ಕಸ್ತೂರ ಬಾ ನಗರದ ನಿವಾಸಿಯಾದ ಮಹ್ಮದ್ ಫಾರೂಕ್ ಶಫಿವುಲ್ಲಾ ಪಟೆಲ್ ಬಂಧಿತ ಆರೋಪಿ. ಇತನನ್ನು ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಚಟುವಟಿಕೆಗಳ ಅಧಿನಿಯಮ 1985ರನ್ವಯ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇದನ್ನೂ ಓದಿ :ಕಾಡಿನಲ್ಲಿ ಮಹಿಳೆಗೆ ಗುಂಡು ತಾಗಿದ್ದ ಪ್ರಕರಣ.. ಪತಿ ಸುಳ್ಳಿಗೆ ಧ್ವನಿಗೂಡಿಸಿದ್ದ ಪತ್ನಿ ಕೊನೆಗೂ ಸತ್ಯ ಬಾಯಿಬಿಟ್ಟಳು!
ಅಪರಾಧ ಹಿನ್ನಲೆ:
ಆರೋಪಿಯ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಮಹ್ಮದ್ ಫಾರೂಕ್ ಎಸ್ಡಿಪಿಐ ಸಂಘಟನೆಯೊಂದಿಗೆ ಸೇರಿ ಪುಂಡರ ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ. ಈ ಮೂಲಕ ಸಾಮಾನ್ಯ ಜನರಲ್ಲಿ ಭಯ ಸೃಷ್ಟಿಸಿ ಕೋಮುಗಲಭೆಗಳು ಉಂಟಾಗುವಂತೆ ಪ್ರಚೋದನೆ ನೀಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆಗೆ ನಿರಂತರವಾಗಿ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಕಂಟಕಪ್ರಾಯವಾಗಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಆದೇಶ ಮಾಡಿದ್ದು, ಶಿರಸಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.