ಶಿರಸಿ:ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆ ಅಲ್ಲ. ವಿಜಯೇಂದ್ರ ಅವರು ಹೇಳಿರುವ ಮಾತು ಸರಿ ಇದೆ. ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ. ಎಲ್ಲೋ ಸಭೆಯಲ್ಲಿ ಕುಳಿತು ಮಾತನಾಡುವುದು ಸರಿ ಅಲ್ಲ. ಇದರ ಬಗ್ಗೆ ನಾವಿಬ್ಬರು ಕುಳಿತುಕೊಂಡು ಜನರ ಮುಂದೆ ಲೈವ್ ಚರ್ಚೆ ಮಾಡೋಣಎಂದು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ, ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಶಿರಸಿಯ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಯಾರೆಲ್ಲ ಏನೇನು ಮಾತನಾಡಿದ್ದಾರೆ, ಯಾರ ಬಗ್ಗೆ ಹೇಗೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ಹೇಳಬೇಕಾ? ಮಾಜಿ ಸಿಎಂ ಯಡಿಯೂರಪ್ಪ, ಅಮಿತ್ ಶಾ, ನಮ್ಮ ದೇವಸ್ಥಾನದ ಬಗ್ಗೆ ಕಾಂಗ್ರೆಸ್ ನಾಯಕರು ಕೀಳಾಗಿ ಮಾತನಾಡಿದ್ದಾರೆ. ಶರದ್ ಪವಾರ್ ಮಾತ್ರವಲ್ಲ ಕಾಂಗ್ರೆಸ್ನ ಬಹುತೇಕ ನಾಯಕರು ಪಿಎಂ ಮೋದಿ ಅವರನ್ನು ಹಿಟ್ಲರ್ ಎಂದು ಕರೆದಿದ್ದಾರೆ. ಇದಕ್ಕೆಲ್ಲ ಮಾಧ್ಯಮಗಳ ದಾಖಲೆಗಳೇ ಇವೆ" ಎಂದು ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ, ಬಿಜೆಪಿಯವರಿಗೆ ಯಾಕೆ? ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ್ ಸಿಂಗ್ ಮೋದಿ ಅವರನ್ನು ರಾವಣ ಎಂದು ಕರೆದರು. ಜಯರಾಂ ರಮೇಶ್ ಅವರು ಭಸ್ಮಾಸುರ ಎಂದು ಕರೆದರು. ಮಣಿಶಂಕರ್ ಅಯ್ಯರ್ ವಿಷಸರ್ಪ ಎಂದು ಕರೆದ್ರು, ಇನ್ನೂ ಏನೆಲ್ಲಾ ಹೇಳಿಸಿಕೊಳ್ಳಬೇಕು ನಾವು?" ಎಂದು ಕೇಳಿದರು.