ಶಿರಸಿ:ರಾಜಕೀಯ ಮೇಲಾಟಕ್ಕೆ ಬಲಿಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿ ಮುಂದುವರೆದ ಪರಿಣಾಮ ಚುನಾವಣೆ ನಡೆದು ಸೆ.3ಕ್ಕೆ ಬರೋಬ್ಬರಿ ಎರಡು ವರ್ಷಗಳೇ ಕಳೆದಿದ್ದರೂ, ಆಯ್ಕೆಯಾದ ಸದಸ್ಯರು ಅಧಿಕಾರ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗಿದ್ದು, ಅಧಿಕಾರಿಗಳ ದರ್ಬಾರ್ ಹೆಚ್ಚಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಬರೋಬ್ಬರಿ ಎರಡು ವರ್ಷ... ಜನಪ್ರತಿನಿಧಿಗಳಿಗೆ ಇನ್ನೂ ಸಿಗದ ಅಧಿಕಾರ! 2018ರ ಆಗಸ್ಟ್ ತಿಂಗಳ ಕೊನೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು, ಸೆಪ್ಟೆಂಬರ್ ನಲ್ಲಿ ಫಲಿತಾಂಶ ಹೊರಬಿದ್ದಿತ್ತು. ಆದರೆ ಮೀಸಲಾತಿ ಪ್ರಕಟ ರಾಜಕೀಯ ತಿರುವು ಪಡೆದುಕೊಂಡ ಕಾರಣ ಎರಡೂ ವರ್ಷಗಳಾದರೂ ಆಯ್ಕೆಯಾದ ಸದಸ್ಯರು ಅಧಿಕಾರಕ್ಕಾಗಿ ಸರ್ಕಾರದತ್ತ ಮುಖ ಮಾಡುವಂತಾಗಿದೆ.
ನೂತನ ಸದಸ್ಯರಿಗೆ ಅಧಿಕಾರ ದೊರಕದಿರುವುದು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯದಿರುವುದು ನಗರ ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದ್ದು, ಫಾರ್ಮ ನಂ.3, ತೆರಿಗೆ ಸಮಸ್ಯೆ, ರಸ್ತೆ ಅಭಿವೃದ್ಧಿ, ಮಳೆಗಾಲ ಪೂರಕ ಕಾಮಗಾರಿ, ನೀರಿನ ಸಮಸ್ಯೆಗಳು ಹೆಚ್ಚಾಗಿದೆ. 2018ರ ಚುನಾವಣಾ ಪೂರ್ವದಲ್ಲಿಯೇ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿತ್ತು. ಆದರೆ ಚುನಾವಣಾ ನಂತರದಲ್ಲಿ ಮೀಸಲಾತಿಯ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ನೂತನ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದು ಈಗಲೂ ಬಗೆಹರಿಯದೇ ಹಾಗೇ ಉಳಿದಿದೆ.
ಶಿರಸಿ ನಗರಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದು, ಅಧಿಕಾರಕ್ಕಾಗಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಧಿಕಾರ ಸಿಗದ ಪರಿಣಾಮ ಕೋವಿಡ್-19 ಸಂದರ್ಭದಲ್ಲಿಯೂ ಕೆಲಸ ಮಾಡಲು ಅಡಚಣೆ ಆಗುತ್ತಿದೆ. ಶೀಘ್ರ ಅಧಿಕಾರ ನೀಡಬೇಕೆನ್ನುವುದು ಎಲ್ಲಾ ಸದಸ್ಯರ ಬೇಡಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಜಯ ಸಾಧಿಸಿದ್ದವು. ಕಾರವಾರ, ಅಂಕೋಲಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಮುಂಡಗೋಡಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಅಂದಿನ ಮುಖಂಡ ಶಿವರಾಮ ಹೆಬ್ಬಾರ್ ಇಂದು ಬಿಜೆಪಿಯಲ್ಲಿದ್ದಾರೆ. ಆದ ಕಾರಣ ಮೀಸಲಾತಿ ಪ್ರಕಟಗೊಂಡು, ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ರಾಜಕೀಯ ಬೆಳವಣಿಗೆಯೂ ನಡೆಯಬಹುದಾಗಿದೆ. ಜನರು ಆದಷ್ಟು ಶೀಘ್ರದಲ್ಲಿ ಅಧಿಕಾರ ಸಿಗಲಿ ಎಂದು ಒತ್ತಾಯಿಸಿದ್ದಾರೆ.