ಶಿರಸಿ : ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕವಾದಿಯಾಗಿದ್ದಾರೆ. ಹಿಂದೂ ವಿರೋಧಿಯಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ಮಶಾನದಲ್ಲಿ ಪೂಜೆ ,ಸ್ಮಶಾನದಲ್ಲಿ ಮದುವೆ, ಸ್ಮಶಾನದಲ್ಲಿ ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಆದ ಕಾರಣ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು, ಹಿಂದೂಗಳ ಕ್ಷಮೆ ಕೇಳಬೇಕು ಆಗ್ರಹಿಸಿದರು.
ಹಿಂದೂ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ : ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಇನ್ನೂ ಕೂಡ ಬುದ್ಧಿ ಬಂದಿಲ್ಲ. ಹಿಂದುತ್ವ, ಹಿಂದೂಗಳನ್ನು, ಹಿಂದೂಧರ್ಮ, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪು ಅವರು ಹಿಂದೂ, ಜೈನ, ಸಿಖ್, ಕ್ರಿಶ್ವಿಯನ್ ಎಂಬ ಶಬ್ದವನ್ನು ನಾಡಗೀತೆಯಲ್ಲಿ ಬಳಸಿದ್ದಾರೆ.