ಕಾರವಾರ:ನಿವೃತ್ತ ಸೈನಿಕನಿಂದ ನಾದಿನಿ, ಮಗ ಹತ್ಯೆಯಾಗಿದ್ದಾರೆ. ಆಸ್ತಿ ಕಲಹದಿಂದ ಸಿಟ್ಟಿಗೆದ್ದ ಮಾಜಿ ಸೈನಿಕ ತನ್ನ ಸಹೋದರನ ಪತ್ನಿ ಹಾಗೂ ಪುತ್ರನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಬಾಲಕ ಮತ್ತು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಂಕೋಲಾ ಪಟ್ಟಣದ ಮಠಾಕೇರಿಯಲ್ಲಿ ನಡೆದಿದೆ.
ಅಂಕೋಲಾದಲ್ಲಿ ಗುಂಡಿನ ಸದ್ದು; ನಿವೃತ್ತ ಸೈನಿಕನಿಂದ ನಾದಿನಿ, ಮಗ ಹತ್ಯೆ
ಆಸ್ತಿ ಕಲಹದ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕನಿಂದ ನಾದಿನಿ, ಮಗ ಹತ್ಯೆಯಾಗಿರುವ ಘಟನೆ ಅಂಕೋಲಾ ಪಟ್ಟಣದ ಮಠಾಕೇರಿಯಲ್ಲಿ ನಡೆದಿದೆ.
ಭೂ ಸೇನೆಯ ನಿವೃತ್ತ ಹವಾಲ್ದಾರ ಅಜಯ್ ಪ್ರಭು ಗುಂಡು ಹಾರಿಸಿದ ಆರೋಪಿ. ತಾಲೂಕಿನ ಮಠಕೇರಿಯ ಅಮಿತ್ ಮಗ ಅನೋಜ್ (09) ಮತ್ತು ಅಮಿತ್ ಅವರ ಪತ್ನಿ ಮೇಧಾ (40) ಮೃತರು. ಅಜಯ್ ಮತ್ತು ಅಮಿತ್ ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು. ಆರೋಪಿ ಅಜಯ್ ಕುಡಿದ ಅಮಲಿನಲ್ಲಿ ತಮ್ಮನ ಮನೆಗೆ ಬಂದಿದ್ದನು. ಈ ವೇಳೆ ಅಮಿತ್ ಮನೆಯಲ್ಲಿ ಇರಲಿಲ್ಲ. ಮೇಧಾ ಮಗನಿಗೆ ಪಾಠ ಹೇಳಿಕೊಡುತ್ತಿದ್ದರು.
ಈ ವೇಳೆ ಏಕಾಏಕಿ ಅಜಯ್ ಡಬಲ್ ಬ್ಯಾರಲ್ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.