ಕಾರವಾರ :ಸೀಬರ್ಡ್ 2ನೇ ಹಂತದ ಕಾಮಗಾರಿ ವೇಳೆ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಾಲೂಕಿನ ಬಾಸುಗೋಡು ಗ್ರಾಮದ ನಡುಬೇಣದಲ್ಲಿ ಜಾಗ ಗುರುತಿಸಲಾಗಿದೆ. ಇದು ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ನಡುಬೇಣ ಉಳಿಸಿ ಗೋಮಾಳ ರಕ್ಷಿಸಿ ಅಭಿಯಾನ.. ಆದರೆ, ಇದೀಗ ವಿಮಾನ ನಿಲ್ದಾಣದಿಂದ ನೆಲೆ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ವಿಭಿನ್ನ ಪ್ರತಿಭಟನೆ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರದೇಶವನ್ನು ವಿಮಾನ ನಿಲ್ದಾಣದ ನಿರಾಶ್ರಿತರಿಗೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ತಮಟೆ ವಾದ್ಯದ ಮೂಲಕ ಮೈದಾನದ ಸುತ್ತ ಮೆರವಣಿಗೆ ನಡೆಸಿ ಯಾವುದೇ ಕಾರಣಕ್ಕೂ ಈ ಪ್ರದೇಶವನ್ನು ನೀಡುವುದಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಪ್ರಸ್ತುತ ಗುರುತಿಸಿರುವ ಜಾಗ ನಿತ್ಯ ಸಾವಿರಾರು ಗೋವುಗಳು ಮೇಯುವ (ಗೋಮಾಳ) ಸ್ಥಳವಾಗಿದೆ. ಅಲ್ಲದೇ ಸ್ವಾತಂತ್ರ್ಯ ಚಳವಳಿ ವೇಳೆ ಕ್ವಿಟ್ ಇಂಡಿಯಾ ಮತ್ತು ಉಪ್ಪಿನ ಸತ್ಯಾಗ್ರಹ ಚಳವಳಿಯ ಬಗ್ಗೆ ಸಭೆಗಳು ನಡೆದು ಸ್ಥಳೀಯರಿಗೆ ಸಂಗ್ರಾಮದ ಕಿಚ್ಚು ಹೊತ್ತಿಸಿದ ಪ್ರದೇಶವಾಗಿದೆ.
ನಡುಬೇಣ ಒಟ್ಟು 9 ಎಕರೆ ಪ್ರದೇಶದಲ್ಲಿದೆ. ಅದರಲ್ಲಿ 6 ಎಕರೆ ಪ್ರದೇಶ ಆಟದ ಮೈದಾನವಾಗಿದೆ. ಆದರೆ, ಮೊದಲಿನಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಕ್ರೀಡಾಂಗಣ ಬಿಟ್ಟು ಉಳಿದ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಕ್ರೀಡಾಂಗಣ ಪಕ್ಕದಲ್ಲಿಯೇ ಸ್ಮಶಾನ ಇದೆ. ಮಾತ್ರವಲ್ಲದೆ ಈ ಪ್ರದೇಶದ ಕುರುಚಲು ಗಿಡಗಳ ಮಧ್ಯೆ ಔಷಧಿ ಗಿಡಗಳಿವೆ. ಅಲ್ಲದೆ ಪ್ರತಿ ದೀಪಾವಳಿಯಂದು ಇಲ್ಲಿ ಒಂದೆಡೆ ಸೇರಲಾಗುತ್ತದೆ. ಇಂತಹ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೇ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶದಲ್ಲಿ ಸರ್ಕಾರ ವಿಮಾನ ನಿಲ್ದಾಣದಿಂದ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿರೋದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.