ಕಾರವಾರ: ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಮೃತ ನವಜಾತ ಶಿಶು ಅಪ್ರಾಪ್ತ ಬಾಲಕಿಗೆ (minor girl) ಜನಿಸಿರುವುದು ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ (newborn baby dead body) ಪತ್ತೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರವಾರ ಪೊಲೀಸರು, ಶಹರ ಪಿಐ ಸಿದ್ದಪ್ಪ ಬೀಳಗಿರಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐ ಸಂತೋಷ ಕುಮಾರ ಹಾಗೂ ತಂಡ ಕೇವಲ ಸಿಸಿಟಿವಿ ಆಧಾರದ ಮೇಲೆ ಪ್ರಕರಣವನ್ನು ಭೇದಿಸಿದ್ದಾರೆ.
ಬಾಲಕಿ ಪುಸಲಾಯಿಸಿ ಲೈಂಗಿಕ ದೌರ್ಜನ್ಯ (Sexual harassment) ಎಸಗಿದ ಆರೋಪಿ ಮಹಮ್ಮದ್ ಮಕಬೂಲ್ ಅಮ್ಮದ್(19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮೂಲತಃ ಉತ್ತರ ಪ್ರದೇಶದವನಾಗಿದ್ದು, ಸದ್ಯ ನಂದನಗದ್ದಾದಲ್ಲಿ ವಾಸಿಸುತ್ತಿದ್ದಾನೆ. ನಗರದ ಕಾಲೇಜ್ವೊಂದರಲ್ಲಿ ಈತ ಓದುತ್ತಿದ್ದು, ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹದಿನೇಳು ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳಸಿದ ಕಾರಣ ಗರ್ಭವತಿಯಾಗಿದ್ದಳು ಎನ್ನಲಾಗಿದೆ.
ಈ ಅಪ್ರಾಪ್ತೆಯು ಹೆರಿಗೆಯಾದ ನಂತರ ಮಗುವನ್ನು ಶೌಚಾಲಯದಲ್ಲಿ ಎಸೆದು ಹೋಗಿದ್ದಳು. ಮಗುವನ್ನು ಕೊಂದು ಎಸೆದಿದ್ದರೋ ಅಥವಾ ಮಗು ಮೃತಪಟ್ಟ ನಂತರ ತಂದು ಎಸೆದಿದ್ದಾರೋ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ (Pocso Act) ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬದ್ರಿನಾಥ ಮತ್ತು ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಇವರ ಮಾರ್ಗದರ್ಶನದಲ್ಲಿ ಕಾರವಾರ ಶಹರ ಪಿಐ ಸಿದ್ದಪ್ಪ ಬೀಳಗಿರಿ ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.