ಕಾರವಾರ:ದೇಶದ ಅತಿದೊಡ್ಡ ನೌಕಾನೆಲೆಯಾಗಿರುವ ಕದಂಬ ನೌಕಾನೆಲೆಗೆ ದೇಶದ ವಿವಿಧೆಡೆಯ ಸಂಸದರನ್ನೊಳಗೊಂಡ ತಂಡ ಜನವರಿ 20ರಂದು ಭೇಟಿ ನೀಡಲಿದೆ.
ಸಂಸತ್ತಿನ ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿಯ ಸದಸ್ಯರಾಗಿರುವ ಸಂಸದರು, ನೌಕಾನೆಲೆಯಲ್ಲಿ ಪ್ರಗತಿಯಲ್ಲಿರುವ 2ನೇ ಹಂತದ ಕಾಮಗಾರಿಯ ಪರಿಶೀಲನೆಯ ಉದ್ದೇಶದಿಂದ ಭೇಟಿ ನೀಡುತ್ತಿದ್ದಾರೆ. ನಾಳೆ ಬೆಳಗ್ಗೆ ವಿಮಾನದ ಮೂಲಕ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಈ ತಂಡ ನೌಕಾನೆಲೆಗೆ ಭೇಟಿ ನೀಡಲಿದೆ.
ಸಂಸತ್ತಿನ ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿಯಲ್ಲಿ ಒಟ್ಟು 21 ಲೋಕಸಭಾ ಸದಸ್ಯರು ಹಾಗೂ 10 ರಾಜ್ಯಸಭಾ ಸದಸ್ಯರಿದ್ದು, ಇದರಲ್ಲಿ ಸದ್ಯದ ಮಾಹಿತಿಯ ಪ್ರಕಾರ ಸಮಿತಿಯ 12 ಸಂಸದರು ಆಗಮಿಸುವುದು ಖಚಿತವಾಗಿದೆ. ಈ ತಂಡದಲ್ಲಿ ಎಐಸಿಸಿ ಮುಖಂಡರೂ ಆಗಿರುವ ರಾಹುಲ್ ಗಾಂಧಿ, ಎನ್‌ಸಿಪಿ ಮುಖಂಡರೂ ಆಗಿರುವ ಶರದ್ ಪವಾರ್, ಜುಯೆಲ್ ಓರಮ್, ಅಜಯ್ ಭಟ್, ಪ್ರೊ.ಡಾ.ರಾಮಶಂಕರ್ ಕಠೇರಿಯಾ, ಜುಗಲ್ ಕಿಶೋರ್ ಶರ್ಮ, ಡಾ.ಶ್ರೀಕಾಂತ್ ಏಕನಾಥ್ ಶಿಂಧೆ, ಪ್ರತಾಪ್ ಸಿಂಹ, ಪ್ರೇಮಚಂದ್ರ ಗುಪ್ತ, ಸಂಜಯ್ ರಾವತ್, ಕಾಮಖ್ಯ ಪ್ರಸಾದ್, ಸುಧಾನ್ಶು ತ್ರಿವೇದಿ ಆಗಮಿಸಲಿದ್ದಾರೆ.