ಕಾರವಾರ: ಕಂಪನಿ ಪ್ರವೇಶಿಸುವ ಮುನ್ನ ತಪಾಸಣೆ ನಡೆಸಿದ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಹಾಗು ಹೊರ ರಾಜ್ಯದ ಕಾರ್ಮಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಮಾರಾಮಾರಿಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 27 ಜನರನ್ನು ಬಂಧಿಸಿರುವ ಘಟನೆ ಕಾರವಾರ ತಾಲೂಕಿನ ಮುದಗಾ ಗ್ರಾಮದಲ್ಲಿ ನಡೆದಿದೆ.
ಮುದಗಾ ಬಳಿ ಕದಂಬ ನೌಕಾನೆಲೆಯ ವಸತಿ ಗೃಹ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಎನ್‌ಸಿಸಿ ಕಂಪನಿಯಲ್ಲಿ ಸ್ಥಳೀಯರು ಸೇರಿದಂತೆ ಒಡಿಶಾ ಹಾಗು ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಆದರೆ, ಕಂಪನಿ ಗೇಟ್ ಪ್ರವೇಶಿಸುವ ಮುನ್ನ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ಗಳು ಹೊರ ರಾಜ್ಯದ ಕಾರ್ಮಿಕರನ್ನು ತಪಾಸಣೆ ನಡೆಸುತ್ತಿದ್ದರು. ನಿತ್ಯ ಬರುವವರನ್ನು ತಪಾಸಣೆ ನಡೆಸುತ್ತಿರುವುದಕ್ಕೆ ಕೆಲವರು ತಗಾದೆ ತೆಗೆದಿದ್ದು, ಗಲಾಟೆಯಾಗಿ ಬಳಿಕ ಅಲ್ಲೆ ಇದ್ದ ಸ್ಥಳೀಯರು ಬಿಡಿಸಿ ತಣ್ಣಗಾಗಿಸಿದ್ದಾರೆ.
ಕಂಪನಿ ಗೇಟ್ ಎದುರು ಪ್ರತಿಭಟನೆ
ಆದರೆ, ಕಂಪನಿ ಒಳಗೆ ತೆರಳಿದ ಒಡಿಶಾ ಮೂಲದ ಕಾರ್ಮಿಕರು ಗುಂಪು ಕಟ್ಟಿಕೊಂಡು ಬಂದು ಕರ್ತವ್ಯ ನಿರತ ಸಿಬ್ಬಂದಿ ಅಭಿಷೇಕ್ ಹರಿಕಂತ್ರ, ರಂಜನ್ ದರ್ಗೇಕರ್ ಹಾಗೂ ಇನ್ನೋರ್ವ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಮೂವರು ಗಂಭೀರ ಗಾಯಗೊಂಡಿದ್ದರು.
ಇದನ್ನು ಗಮನಿಸಿದ ಅಲ್ಲಿಯೇ ಕೆಲಸ ಮಾಡುತ್ತಿದ್ದ ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಕೆಲಸವನ್ನು ಸ್ಥಗಿತಗೊಳಿಸಿದ ಸಿಬ್ಬಂದಿ ಕಂಪನಿ ಗೇಟ್ ಎದುರು ಪ್ರತಿಭಟನೆ ನಡೆಸಿದರು.