ಕಾರವಾರ: ಸೀಬರ್ಡ್ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ದೇಶದ ರಕ್ಷಣಾ ವ್ಯವಸ್ಥೆಗೆ ಕೈಗನ್ನಡಿಯಾಗಿರುವ ಈ ಯೋಜನೆಗಾಗಿ ಸ್ಥಳೀಯರು ತಮ್ಮ ಮನೆ ಜಮೀನುಗಳನ್ನೇ ತ್ಯಾಗ ಮಾಡಿ ನಿರಾಶ್ರಿತರಾಗಿದ್ದಾರೆ. ಆದರೆ ಸೀಬರ್ಡ್ನಲ್ಲಿ ಗುತ್ತಿಗೆ ಪಡೆದಿರುವ ಕಂಪೆನಿಗಳು ಇವರಲ್ಲಿ ಕೆಲವರಿಗಷ್ಟೇ ಉದ್ಯೋಗ ನೀಡಿದೆ. ಅದರಲ್ಲೂ ಸರಿಯಾಗಿ ಪಿಎಫ್, ಇಎಸ್ಐ, ವಾರದ ರಜೆ ಕೊಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸಿಟ್ಟಿಗೆದ್ದ ಸ್ಥಳೀಯರು ಹಾಗೂ ಹೊರಗುತ್ತಿಗೆ ನೌಕರರು ಸೀಬರ್ಡ್ ನೌಕಾನೆಲೆ ಗೇಟ್ ಎದುರು ಪ್ರತಿಭಟನೆ ನಡೆಸಿ ಕಾರವಾರದವರೆಗೆ ಪಾದಯಾತ್ರೆ ನಡೆಸಿದ್ದಾರೆ.
ನೌಕಾನೆಲೆಯ ಗುತ್ತಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರನೋರ್ವ ಕಾರವಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಆತನ ಪ್ರತಿಕೃತಿ ಇಟ್ಟು ಪ್ರತಿಭಟಿಸಿದ್ದಾರೆ. ಅರಗಾ ನೌಕಾನೆಲೆ ಗೇಟ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸದ್ಯ ಗುತ್ತಿಗೆ ಕಂಪೆನಿ ಅಧಿಕಾರಿಗಳು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ಹಾಗೂ ಸೌಲಭ್ಯಗಳನ್ನು ಕಲ್ಪಿಸಲು ಒಪ್ಪಿದ್ದು ನಾವು 20 ದಿನ ಕಾಲಾವಕಾಶ ನೀಡಿದ್ದೇವೆ. ಒಂದೊಮ್ಮೆ ಬೇಡಿಕೆ ಈಡೇರದೇ ಇದ್ದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದ್ದಾರೆ.