ಕಾರವಾರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸತೀಶ್ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಪಕ್ಷವು ಭಾರತದ ಜೊತೆ ಸಂಪರ್ಕ ತಪ್ಪಿಸಿಕೊಂಡಿದೆ. ದೇಶ- ಧರ್ಮದ ಬಗ್ಗೆ ಅರಿವಿಲ್ಲದೆ ಅಜ್ಞಾನದ ಮನಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಂದೂ ಎಂದರೆ ಒಂದು ಜೀವನ ಪದ್ಧತಿ. ಇದನ್ನು ಒಡೆದು ಆಳಲು ಬ್ರಿಟಿಷರು ಆರ್ಯ - ದ್ರಾವಿಡ ಎಂಬ ಸಂಸ್ಕೃತಿಯನ್ನು ಬಿಂಬಿಸಿದರು. ಕಾಂಗ್ರೆಸ್ ಪಕ್ಷವು ಮತ್ತೆ ಅದನ್ನೇ ಪುನರುಚ್ಛಾರ ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದೂ ಮೌಲ್ಯ ಕಡಿಮೆ ಆಗದು: ದೇಶದ ಮೂಲ ಸಂಸ್ಕೃತಿ ಹಿಂದೂ ಹೆಸರಿನಲ್ಲೇ ಬಂದಿದೆ. ಆದರೆ, ಪ್ರಸ್ತುತ ನಾವು ಈ ದೇಶದ ಹಿಂದೂ ಧರ್ಮ ಸನಾತನ ಧರ್ಮ, ಶ್ರೇಷ್ಠ, ಅತ್ಯಂತ ಪುರಾತನ, ಗೌರವಯುತವಾದುದು ಎಂದೇ ತಿಳಿದಿದ್ದೇವೆ. ಸಮಗ್ರ ಮಾನವ ಜೀವನಕ್ಕೆ ಬೇಕಾದ ಒಂದು ಜೀವನ ಪದ್ಧತಿಯ ಅಡಕವು ಆ ಶಬ್ದದ ಒಳಗೆ ಅಡಗಿದೆ. ಯಾರೋ ಒಬ್ಬರು ಅದನ್ನು ಅರ್ಥ ಮಾಡಿಕೊಳ್ಳದೆ ಮನಬಂದಂತೆ ವರ್ಣನೆ ಮಾಡಿದರೆ ಹಿಂದೂ ಧರ್ಮದ ಮೌಲ್ಯ ಕಡಿಮೆ ಆಗದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಶಾಸಕ ಸತೀಶ್ ಜಾರಕಿಹೊಳಿಯವರು ಬಹುಸಂಖ್ಯಾತ ಹಿಂದುಗಳನ್ನು ನಿಂದಿಸಿದ್ದಲ್ಲದೆ ನಮ್ಮ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಕೂಡಲೇ ಇಂತಹ ಸಮಾಜ ಘಾತುಕ ಕೃತ್ಯವೆಸಗಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ; ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ