ಕಾರವಾರ:ಜೋಯಿಡಾ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಇಲ್ಲಿನ ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಸೇತುವೆಯೊಂದು ಮುಳುಗಿದೆ. ಪರಿಣಾಮ ಗ್ರಾಮವೊಂದಕ್ಕೆ ವ್ಯಕ್ತಿಯ ಮೃತದೇಹವನ್ನು ಸಾಗಿಸಲು ಜನರು ಸಂಕಷ್ಟ ಅನುಭವಿಸಿದರು. ದೋಣಿ ಮೂಲಕ ದಡಸೇರಿದ ನಂತರ ಹೆಗಲ ಮೇಲೆ ಶವ ಹೊತ್ತು ಮನೆ ತಲುಪಿಸಿದರು.
ಕುಂಡಲ್ ಗ್ರಾಮದ ರಾಜಾ ವೆಳಿಪ ಮತ್ತು ಗಣೇಶ ವೆಳಿಪ ಎಂಬ ಇಬ್ಬರು ರೋಗಿಗಳನ್ನು ರಿವರ್ ರ‍್ಯಾಪ್ಟಿಂಗ್ ಬೋಟ್ ಮೂಲಕ ಹೊರತಂದು ಜೋಯಿಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಣೇಶ ವೆಳಿಪ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಇವರ ಮೃತದೇಹವನ್ನು ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಊರಿಗೆ ತೆಗೆದುಕೊಂಡು ಹೋಗಬೇಕಿತ್ತು. ಆದರೆ ಸೇತುವೆ ಮುಳುಗಡೆಯಾಗಿದ್ದರಿಂದ ದೋಣಿ ಮೂಲಕ ಸ್ವಗ್ರಾಮ ಕುಂಡಲಕ್ಕೆ ಸಾಗಿಸಲಾಗಿದೆ.
ಮುಳುಗಿದ ಸೇತುವೆಯಿಂದ ಕುಂಡಲ ಗ್ರಾಮ 9 ಕಿ.ಮೀ ದೂರದಲ್ಲಿದೆ. ವಾಹನ ವ್ಯವಸ್ಥೆ ಇಲ್ಲದೆ ಜನರು ಕಂಬಳಿ ಕಟ್ಟಿ ಹೆಗಲ ಮೇಲೆ ಶವ ಹೊತ್ತು ಕಾಲ್ನಡಿಗೆಯ ಮೂಲಕವೇ ಸಾಗಿದರು. ಬಳಿಕ ಕುಣಬಿ ಸಾಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.
ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಪರದಾಟ : ಅಪ್ಪರ ಕಾನೇರಿ ಜಲಾಶಯದ ಹಿನ್ನೀರು ಹೆಚ್ಚಾಗಿದ್ದು ಝಾಲಾವಳಿ, ಕೆಲೋಲಿ, ದೇವಸ ಮತ್ತು ಆದಿಗೋವಾ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೆಲೋಲಿ ಗ್ರಾಮದಲ್ಲಿ ಮಾಬಳು ನಾರಾಯಣ ಗಾವಡಾ ಎಂಬವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಭಾರಿ ಮಳೆಯಿಂದಾಗಿ ಆಸ್ಪತ್ರೆಗೆ ತೆರಳಲಾಗದೇ ಮನೆಯಲ್ಲಿಯೇ ಇದ್ದರು. ಅಂತಿಮವಾಗಿ ಇವರನ್ನು ಸುಮಾರು 5 ಕಿ.ಮೀ. ಕಂಬಳಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆತರಬೇಕಾಯಿತು. ಈ ಸಂದರ್ಭದಲ್ಲಿ ಅವರು ನೋವು ಸಹಿಲಾರದೆ ಕಂಬಳಿಯಲ್ಲಿ ನರಳುತ್ತಿದ್ದರು.