ಕಾರವಾರ: ಕಡಲಾಳದಲ್ಲಿ ಮೀನುಗಳ ಜೊತೆಗೆ ಈಜಾಡುತ್ತಾ ಆಳಸಮುದ್ರ ಜೀವಿಗಳ ಲೋಕವನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಸಮುದ್ರದಾಳವನ್ನು ನೋಡುವ ಅವಕಾಶವನ್ನು ಕಲ್ಪಿಸುವ ರಾಜ್ಯದ ಏಕೈಕ ಪ್ರದೇಶ ಅಂದ್ರೆ ಅದು ಉತ್ತರಕನ್ನಡ ಜಿಲ್ಲೆಯ ನೇತ್ರಾಣಿ ದ್ವೀಪ.
ಕೊರೊನಾ ಹಿನ್ನೆಲೆ ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿದ್ದ ಸ್ಕೂಬಾ ಡೈವಿಂಗ್ ಅನ್ನು ಪ್ರಾರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ನಿನ್ನೆಯಿಂದಲೇ ಈ ಮನರಂಜನಾ ಕ್ರೀಡೆ ಆರಂಭಗೊಂಡಿದೆ. ಮುರುಡೇಶ್ವರ, ನೇತ್ರಾಣಿ ಸ್ಕೂಬಾ ಡೈವಿಂಗ್ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ನೇತ್ರಾಣಿ ಸ್ಕೂಬಾ ಡೈವಿಂಗ್ ಮತ್ತೆ ಶುರು.. ಧಾರ್ಮಿಕ ಹಾಗೂ ಪ್ರವಾಸೋದ್ಯಮ ವಿಚಾರವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ತಾಣಗಳಲ್ಲಿ ಮುರುಡೇಶ್ವರ ಸಹ ಒಂದು. ರಾಜ್ಯದಲ್ಲಿಯೇ ಅತೀ ಎತ್ತರದ ಶಿವನ ಮೂರ್ತಿಯನ್ನು ಹೊಂದಿರುವ ಮುರುಡೇಶ್ವರಕ್ಕೆ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ದೇಶದ ವಿವಿಧೆಡೆಗಳಿಂದ ಆಗಮಿಸುತ್ತಾರೆ.
ಅದರಲ್ಲೂ ಸ್ಕೂಬಾ ಡೈವಿಂಗ್ ಮಾಡಲು ಪ್ರಶಸ್ತ ಸ್ಥಳಗಳಿರುವ ತಾಣಗಳಲ್ಲಿ ಮುರುಡೇಶ್ವರ ನೇತ್ರಾಣಿ ದ್ವೀಪ ದೇಶದಲ್ಲಿಯೇ ಎರಡನೇಯ ಸ್ಥಾನ ಪಡೆದಿದೆ. ಹೀಗಾಗಿ, ಸಾಕಷ್ಟು ಮಂದಿ ಸ್ಕೂಬಾ ಡೈವಿಂಗ್ ಮಾಡುವ ಉದ್ದೇಶದಿಂದಲೇ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸುತ್ತಾರೆ.
ಪ್ರವಾಸೋದ್ಯಮಕ್ಕೆ ಉತ್ತೇಜನ :ಆದ್ರೆ, ಕೊರೊನಾ ಮೊದಲನೆಯ ಅಲೆ ಅಪ್ಪಳಿಸಿದ ಬಳಿಕ ಸ್ಕೂಬಾ ಡೈವಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಸರಿ ಸುಮಾರು ಒಂದೂವರೆ ವರ್ಷದ ಬಳಿಕ ಮತ್ತೆ ಸ್ಕೂಬಾ ಡೈವಿಂಗ್ ಪ್ರಾರಂಭಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ. ಜಿಲ್ಲೆಯ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆಯಿದೆ. ಸದ್ಯ ಪ್ರತಿ ನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆ ಸಹ ಗಣನೀಯವಾಗಿ ಇಳಿಕೆಯಾಗುತ್ತಿವೆ.
ಹೀಗಾಗಿ, ಕೊರೊನಾ ಹೊಡೆತದಿಂದಾಗಿ ನೆಲಕಚ್ಚಿದ್ದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಅನ್ನು ಪುನಾರಂಭಿಸಲು ಅವಕಾಶವನ್ನು ನೀಡಲಾಗಿದೆ. ಆದ್ರೆ, ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ನೇತ್ರಾಣಿ ದ್ವೀಪ :ಭಟ್ಕಳ ತಾಲೂಕಿನ ಮುರುಡೇಶ್ವರದಿಂದ ಸುಮಾರು 19 ಕಿಲೋ ಮೀಟರ್ ದೂರದ ಸಮುದ್ರದಲ್ಲಿ ನೇತ್ರಾಣಿ ದ್ವೀಪವಿದೆ. ಕರ್ನಾಟಕದಲ್ಲಿಯೇ ಸ್ಕೂಬಾ ಡೈವಿಂಗ್ ಮಾಡುವ ಏಕೈಕ ಸ್ಥಳ ನೇತ್ರಾಣಿ ದ್ವೀಪವಾಗಿದೆ. ಹಲವಾರು ಬಗೆಯ ಜಲಚರಗಳಿಗೆ ಸ್ಥಾನವನ್ನು ಒದಗಿಸುವ ಮೂಲಕ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನು ಹೊಂದಿದೆ.
ಹವಳದಂಡೆಯನ್ನು ಹೊಂದಿರುವ ರಾಜ್ಯದ ಏಕೈಕ ಪ್ರದೇಶವಾಗಿರುವುದರ ಜೊತೆಗೆ ಅಪರೂಪದ ಕಡಲಜೀವಿಗಳ ಸುಮಾರು 35ಕ್ಕೂ ಅಧಿಕ ಪ್ರಬೇಧಗಳನ್ನು ಇಲ್ಲಿ ಗುರುತಿಸಲಾಗಿದೆ. ಸ್ವಚ್ಛವಾದ ನೀರನ್ನು ಈ ಪ್ರದೇಶ ಹೊಂದಿರುವುದರಿಂದ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಸಮುದ್ರದ ಸುಮಾರು 12 ಅಡಿ ಆಳದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಅಪರೂಪದ ಹವಳದಂಡೆಗಳು ಹಾಗೂ ಭಿನ್ನ-ವಿಭಿನ್ನ ಜಲಚರಗಳನ್ನು ನೋಡುವ ಅವಕಾಶವನ್ನು ಇದು ಒದಗಿಸಿ ಕೊಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಕ್ರೇಜ್‌ನಿಂದಲೇ ಸಾಕಷ್ಟು ಮಂದಿ ಪ್ರವಾಸಿಗರೂ ಸಹ ಆಗಮಿಸುತ್ತಿದ್ದಾರೆ. ಇದೀಗ ಜಿಲ್ಲಾಡಳಿತ ಅವಕಾಶ ನೀಡಿರುವುದು ಸಾಕಷ್ಟು ಅನುಕೂಲವಾಗಲಿದೆ ಅಂತಾರೆ ಸ್ಕೂಬಾ ಡೈವಿಂಗ್ ಆಯೋಜಕರು.
ಇದನ್ನೂ ಓದಿ:ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ ಯದುವೀರ್
ಸತತ 2 ವರ್ಷಗಳಿಂದ ಕೊರೊನಾ ಅಬ್ಬರಕ್ಕೆ ಮಂಕಾಗಿದ್ದ ಉತ್ತರಕನ್ನಡ ಪ್ರವಾಸೋದ್ಯಮ ಸದ್ಯ ಚೇತರಿಸಿಕೊಳ್ಳುತ್ತಿದೆ. ಇದೀಗ ಸ್ಕೂಬಾ ಡೈವಿಂಗ್‌ಗೂ ಅವಕಾಶ ನೀಡಿರೋದು ಮತ್ತಷ್ಟು ಉತ್ತೇಜನ ನೀಡೋದಂತೂ ಸತ್ಯ.