ಕಾರವಾರ:ಮಳೆಯಿಂದಾಗಿ ಧ್ವಜ ಬಿಚ್ಚಿಕೊಳ್ಳದ ಕಾರಣ ಧ್ವಜವನ್ನು ಕೆಳಗಿಳಿಸಿ ಎರಡೆರಡು ಬಾರಿ ಧ್ವಜಾರೋಹಣ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕಾರವಾರದಲ್ಲಿ ಬಿಚ್ಚದ ರಾಷ್ಟ್ರಧ್ವಜ... ಎರಡೆರಡು ಬಾರಿ ಮೊಳಗಿದ ರಾಷ್ಟ್ರಗೀತೆ - Dc D. Harishkumar K
ಜಿಲ್ಲೆಯಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ಎರಡು ಬಾರಿ ರಾಷ್ಟ್ರಗೀತೆಯನ್ನು ಹಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಧ್ವಜಕ್ಕೆ ಕಟ್ಟಿದ್ದ ದಾರ ಹಸಿಗೊಂಡಿದ್ದ ಹಿನ್ನೆಲೆ ಈ ಅಚಾತುರ್ಯ ನಡೆಯಿತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ನಗರದ ಜಿಲ್ಲಾ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿದೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ ಧ್ವಜಾರೋಹಣ ಮಾಡಲು ದಾರವನ್ನು ಎಳೆದಾಗ ಧ್ವಜ ಬಿಚ್ಚಿಕೊಂಡಿರಲಿಲ್ಲ. ಎಷ್ಟೇ ಎಳೆದರು ಧ್ವಜದಿಂದ ದಾರ ಬಿಚ್ಚಿರಲಿಲ್ಲ. ಅಷ್ಟರಲ್ಲಾಗಲೇ ಬ್ಯಾಂಡ್ ನುಡಿಸುವವರು ರಾಷ್ಟ್ರಗೀತೆ ಆರಂಭಿಸಿದ್ದರಿಂದ ಗೀತೆ ಮುಗಿದ ಬಳಿಕ ಮತ್ತೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ದಾರದಿಂದ ಬಿಚ್ಚಿ ಹಾರಿಸಲಾಯಿತು.
ಬಳಿಕ ಮತ್ತೆ ರಾಷ್ಟ್ರಗೀತೆಯನ್ನು ಹಾಡಿ ಗೌರವ ಸೂಚಿಸಲಾಯಿತು. ಉತ್ತರಕನ್ನಡ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ಧ್ವಜಾರೋಹಣದ ವೇಳೆ ಸ್ವಲ್ಪ ಬಿಡುವು ನೀಡಿತ್ತು. ಆದರೆ ಮಳೆಯಿಂದಾಗಿ ಹಗ್ಗ ಮತ್ತು ಧ್ವಜ ಎರಡು ನೆನೆದುಕೊಂಡ ಕಾರಣ ಬಿಚ್ಚಿಕೊಳ್ಳಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.