ಕಾರವಾರ:ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಖೋಟಾನೋಟು ಚಲಾವಣೆಯ ಜಾಲವನ್ನು ಪತ್ತೆ ಮಾಡಿದ್ದು, 60 ಲಕ್ಷಕ್ಕೂ ಅಧಿಕ ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಲಾಕ್ಡೌನ್ ಜಾರಿಯಲ್ಲಿದ್ದರೂ ಇಷ್ಟು ಪ್ರಮಾಣದಲ್ಲಿ ಚಲಾವಣೆಗೆ ಸಿದ್ಧವಾಗಿದ್ದ ಖೋಟಾನೋಟಿನ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರಿಗೆ ಇದೀಗ ಹೊಸ ಸವಾಲು ಎದುರಾಗಿದೆ.
ದಾಂಡೇಲಿ ತಾಲೂಕಿನ ಭರ್ಚಿ ಗ್ರಾಮದ ಚೆಕ್ ಪೋಸ್ಟ್ನಲ್ಲಿ ಜೂನ್ 1ರಂದು ಖಚಿತ ಮಾಹಿತಿಯ ಮೇಲೆ ಪೊಲೀಸರು ಸ್ವಿಫ್ಟ್ ಡಿಸೈರ್ ಕಾರೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕಾರಿನಲ್ಲಿ ಬರೋಬ್ಬರಿ 9 ಲಕ್ಷ ರೂ. ಹಣ ಪತ್ತೆಯಾಗಿತ್ತು. ಆದ್ರೆ ಆ ಹಣವನ್ನ ಕೂಲಂಕಷವಾಗಿ ಪರಿಶೀಲಿಸಿದಾಗ ಖೋಟಾನೋಟು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಕಾರಿನಲ್ಲಿದ್ದ ನಾಲ್ವರು ಹಾಗೂ ಹಣವನ್ನು ತಂದಿದ್ದ ಇನ್ನಿಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ಬಳಿಕ ಆರೋಪಿತರ ಬಳಿ ವಿಚಾರಿಸಿದಾಗ ಬರ್ಚಿ ಗ್ರಾಮದ ಶಿವಾಜಿ ಕಾಂಬಳೆ ಹಾಗೂ ಶಬ್ಬೀರ್ ಇಸ್ಮಾಯಿಲ್ ಶೇಖ್ ಮಹಾರಾಷ್ಟ್ರ ಮೂಲದವರ ಬಳಿ ನಾಲ್ಕೂವರೆ ಲಕ್ಷ ರೂ. ನೀಡಿದರೆ ಅದಕ್ಕೆ ಬದಲಾಗಿ 9 ಲಕ್ಷ ನೀಡೋದಾಗಿ ಹೇಳಿ ಕರೆಸಿಕೊಂಡಿದ್ದರಂತೆ. ಅದರಂತೆ ದಾಂಡೇಲಿಗೆ ಬಂದಿದ್ದ ಗ್ಯಾಂಗ್ ಹಣವನ್ನು ಪರಿಶೀಲನೆ ಮಾಡುವ ವೇಳೆ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.
ಪ್ರಕರಣದಲ್ಲಿ ದಾಂಡೇಲಿಯ ಶಿವಾಜಿ ಹಾಗೂ ಇಸ್ಮಾಯಿಲ್ ಸೇರಿ ಖೋಟಾನೋಟು ಖರೀದಿಸಲು ಬಂದಿದ್ದ ಮಹಾರಾಷ್ಟ್ರ ಮೂಲದ ಕಿರಣ ದೇಸಾಯಿ, ಗಿರೀಶ ಪೂಜಾರಿ, ಬೆಳಗಾವಿ ಮೂಲದ ಅಮರ ನಾಯ್ಕ ಹಾಗೂ ಸಾಗರ ಕುಣ್ಣೂರಕರ್ ಎಂಬುವವರನ್ನು ಬಂಧಿಸಲಾಗಿದೆ.