ಭಟ್ಕಳ: ತೌಕ್ತೆ ಚಂಡಮಾರುತದಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಮಂಗಳವಾರ ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹೆರ್ತಾರ್, ಜಾಲಿಕೊಡಿ ಹಾಗೂ ಬಂದರು ಭಾಗಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ತೌಕ್ತೆ ಚಂಡಮಾರುತದಿಂದಾಗಿ ಹಾನಿಗೊಳಗಾದ ಕರಾವಳಿ ಭಾಗದಲ್ಲಿ ಆಗಿರುವ ಹಾನಿಯನ್ನು ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ವಿಶೇಷವಾಗಿ ಕಡಲ ಕೊರೆತದಿಂದ ಆಗಿರುವ ಮನೆ ಹಾನಿಗಳ ಬಗ್ಗೆ ಸಮೀಕ್ಷೆ ನಡೆಯಬೇಕಿದ್ದು, ಅದೇ ರೀತಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳೆ ಹಾನಿ ಆದವರಿಗೆ ಎನ್ಡಿಆರ್ಎಫ್ ನಿಯಮದ ಪ್ರಕಾರ ಪರಿಹಾರ ಕೊಡಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಭಟ್ಕಳದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಆರ್. ಅಶೋಕ್ ಭೇಟಿ ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಒಟ್ಟು 48 ಗ್ರಾಮಗಳಲ್ಲಿ ,176 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 86 ಮೀನುಗಾರಿಕೆ ಬೋಟ್ಗಳು 45 ಮೀನುಗಾರಿಕೆ ಬಲೆಗಳಿಗೆ ಹಾನಿಯಾಗಿದೆ. 3.57 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. 557 ವಿದ್ಯುತ್ ಕಂಬಗಳು ಧರೆಗುರುಳಿದ್ದು, 8 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅದರಲ್ಲಿ 107 ಮಂದಿಗೆ ಆಶ್ರಯ ನೀಡಲಾಗಿದೆ.
ಭಟ್ಕಳದಲ್ಲಿ ಸಾವನ್ನಪ್ಪಿದ ಮೀನುಗಾರನಿಗೆ 5 ಲಕ್ಷ ರೂಪಾಯಿ ಚೆಕ್ ನೀಡಲಿದ್ದೇವೆ. ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ಎಷ್ಟು ಹಾನಿಯಾಗಿದೆ ಎಂಬುದರ ವಿವರ ತಿಳಿದಿದೆ. ಮೂರ್ನಾಲ್ಕು ದಿನಗಳಲ್ಲಿ ಇನ್ನಷ್ಟು ಹಾನಿಯ ಪ್ರಮಾಣದ ವಿವರ ಸಿಗಲಿದೆ. ಅಧಿಕಾರಿಗಳಿಂದ ವಿವರ ಪಡೆದು ಎಲ್ಲರಿಗೂ ಪರಿಹಾರ ನೀಡಲಿದ್ದೇನೆ ಮತ್ತು ಮನೆಗಳಿಗೆ ನೀರು ನುಗ್ಗಿದ್ದಲಿ, ಅರ್ಧ ಮನೆ ಹಾನಿಯಾದವರಿಗೆ 1 ಲಕ್ಷ ರೂಪಾಯಿ ಮತ್ತು ಅದೇ ರೀತಿ ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾದವರಿಗೆ 5 ಲಕ್ಷ ರೂಪಾಯಿಯನ್ನು ಸ್ಥಳ ಪರಿಶೀಲನೆ ನಡೆಸಿದ ಬಳಿಕ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಶಾಸಕಿ ರೂಪಾಲಿ ನಾಯಕ್ ಹಾಜರಿದ್ದರು.