ಕಾರವಾರ:ಯುವ ಪ್ರೇಮಿಗಳಿಬ್ಬರು ವಿಷ ಸೇವಿಸಿ ಮುಂಡಗೋಡದ ಬಾಚಣಕಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಯುವಕನಿಗಾಗಿ ಹುಡುಕಾಟ ಮುಂದುವರೆದಿದೆ.
ಕಲಕೇರಿ ಗ್ರಾಮದ ಯುವತಿ ತನುಜಾ ಪಾಟೀಲ್ ಮೃತ ದೇಹ ಪತ್ತೆಯಾಗಿದೆ. ಹನುಮಾಪುರ ಗ್ರಾಮದ ಯುವಕ ಮಹೇಶ ಒಡೋಣೆ ದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ. ಇಬ್ಬರು ಈ ಹಿಂದೆ ಅಂದಲಗಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿದ ಬಳಿಕ ಕುಟುಂಬದವರಿಗೆ ಇವರಿಬ್ಬರ ಪ್ರೀತಿಯ ವಿಷಯ ತಿಳಿದಿದ್ದರಿಂದಾಗಿ, ಯುವತಿಯನ್ನು ಒಂದು ವರ್ಷ ಶಿರಸಿ ಕಾಲೇಜಿಗೆ ಕಳುಹಿಸಿದ್ದರು.
ಒಂದು ವರ್ಷ ಶಿರಸಿ ಕಾಲೇಜಿಗೆ ತೆರಳುತ್ತಿದ್ದ ಯುವತಿ ಬಳಿಕ ಮುಂಡಗೋಡ ಕಾಲೇಜಿಗೆ ಪ್ರವೇಶ ಪಡೆದಿದ್ದಳು. ಮುಂಡಗೋಡಕ್ಕೆ ಬರುತ್ತಿದ್ದಂತೆ ಇವರಿಬ್ಬರ ನಡುವೆ ಪ್ರೀತಿ ಮುಂದುವರೆದಿತ್ತು. ಈ ವಿಷಯ ವಿದ್ಯಾರ್ಥಿನಿ ಮನೆಯವರಿಗೆ ಗೊತ್ತಾಗಿದ್ದರಿಂದ, ಇವರಿಬ್ಬರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಮಗಳಿಗೆ ಹಾಗೂ ಯುವಕನಿಗೆ ಮನೆಯವರು ಬುದ್ಧಿ ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಗಂಗೂಬಾಯಿ ಕಥಿಯಾವಾಡಿ ಚಿತ್ರದ ವಿರುದ್ಧದ 2 ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್
ಇಷ್ಟಾದರೂ ಇವರಿಬ್ಬರ ನಡುವೆ ಪ್ರೀತಿ ಮುಂದುವರೆದಿತ್ತು ಎನ್ನಲಾಗಿದೆ. ಇದರಿಂದ ಬಿಸಿಎಮ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಓದುತ್ತಿದ್ದ ಹುಡುಗನಿಗೆ ಹುಡಗಿ ಮನೆಯವರು ಎಚ್ಚರಿಕೆ ನೀಡಿದ್ದರಂತೆ. ಇದರಿಂದ ಮನನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ನಿಂಗಪ್ಪ ಜಕ್ಕಣ್ಣವರ್ ಮತ್ತು ಅವರ ತಂಡ ಇಬ್ಬರ ಮೃತದೇಹ ಹುಡುಕಾಟದಲ್ಲಿ ತೊಡಗಿಸಿಕೊಂಡಿತ್ತು.