ಕಾರವಾರ:ಗಡಿ ಜಿಲ್ಲೆ ಕಾರವಾರದಲ್ಲಿ ಭಾಷಾ ವಿವಾದ ದಿನೇ ದಿನೆ ಹೆಚ್ಚಾಗುತ್ತಿದೆ. ನಗರಸಭೆ ಸ್ಥಳೀಯ ವಾರ್ಡ್ ಗಳ ಸೂಚನಾ ಫಲಕಗಳನ್ನು ಕೊಂಕಣಿ ಭಾಷಿಗರಿಗೆ ಅರ್ಥವಾಗಲು ಹಿಂದಿಯಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆಯ ನಡೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.
ಹಿಂದಿ ಹೇರಿಕೆಗೆ ಕನ್ನಡಪರ ಸಂಘಟನೆಗಳ ವಿರೋಧ :ಗೋವಾ ಗಡಿ ಪ್ರದೇಶವಾದ ಕಾರವಾರದಲ್ಲಿ ಕೊಂಕಣಿ ಭಾಷಿಗರ ಸಂಖ್ಯೆ ಅಧಿಕವಿದೆ. ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯಲ್ಲಿನ ವಾರ್ಡ್ ಗಳ ಸೂಚನ ಫಲಕಗಳನ್ನು ಗೋವಾ ಮತ್ತು ಮುಂಬೈನಿಂದ ಆಗಮಿಸುವ ಕೆಲವರಿಗೆ ಕನ್ನಡ ಬಾರದ ಕಾರಣಕ್ಕೆ ಹಿಂದಿ ಭಾಷೆಯಲ್ಲಿ ಬರೆಸಲಾಗಿತ್ತು. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಫಲಕಗಳನ್ನು ಹಾಕಿದ್ದು ಕರ್ನಾಟಕದಲ್ಲಿ ಕನ್ನಡ ಒಂದೇ ಭಾಷೆ ಇರಬೇಕು. ಯಾವುದೇ ಕಾರಣಕ್ಕೂ ಸರ್ಕಾರವೇ ಅನ್ಯ ಭಾಷೆಗೆ ಅವಕಾಶ ಕೊಡಬಾರದು ಎಂದು ನಗರಸಭೆ ನಡೆಯ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರಸಭೆ ಅಳವಡಿಸಿದ್ದ ಫಲಕಗಳಿಗೆ ಮಸಿ ಬಳಿದಿದ್ದಾರೆ. ಈ ಬಗ್ಗೆ ಕೊಂಕಣಿ ರಕ್ಷಣಾ ಮಂಚ್ ಎನ್ನುವ ಸಂಘಟನೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ.